ಚಿಕ್ಕಮಗಳೂರು :ಜಿಲ್ಲೆಯ ಕಳಸ ತಾಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ವಾಸ ಮಾಡುವವರು ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಗೂ ಬಡವರು. ಇಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದ್ದರೂ ಕೂಡ ಕರ್ತವ್ಯ ನಿರ್ವಹಿಸಲು ಒಬ್ಬನೇ ಒಬ್ಬ ವೈದ್ಯನಿರಲಿಲ್ಲ. ಈ ಸಮಸ್ಯೆ ಕುರಿತು ಈಟಿವಿ ಭಾರತ ವರದಿ ಮಾಡಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿತ್ತು. ಪರಿಣಾಮ, ಇದೀಗ ಅಧಿಕಾರಿಗಳು ಓರ್ವ ವೈದ್ಯರನ್ನು ನೇಮಕ ಮಾಡಿದೆ.
ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಿನ ತಾಲೂಕು ಎಂದೇ ಪ್ರಸಿದ್ಧಿ ಪಡೆದಿರುವ ಕಳಸ ತಾಲೂಕು ಕೇಂದ್ರವಾಗಿ ಹಲವಾರು ತಿಂಗಳುಗಳೇ ಕಳೆದುಹೋಗಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ ಕೂಡ ಕರ್ತವ್ಯ ನಿರ್ವಹಿಸಲು ವೈದ್ಯನಿರಲಿಲ್ಲ. ಅಪಘಾತ ಸಂಭವಿಸಿದಾಗ ಅಥವಾ ಇತರೆ ಚಿಕಿತ್ಸೆ ಪಡೆಯಬೇಕು ಎಂದರೆ ಮಂಗಳೂರು ಹಾಗೂ ಮಣಿಪಾಲಿಗೆ ಹೋಗಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲಾ ಸಮಸ್ಯೆಗಳ ಕುರಿತು ಕಳೆದ ಕೆಲ ದಿನಗಳ ಹಿಂದೆ ಈಟಿವಿ ಭಾರತ ವರದಿ ಮಾಡಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿತ್ತು. ವರದಿ ಮಾಡಿದ ಬೆನ್ನಲ್ಲೇ ಕೊನೆಗೂ ಸರ್ಕಾರಿ ಆಸ್ಪತ್ರೆಗೆ ಶಾಶ್ವತ ವೈದ್ಯರನ್ನು ನೇಮಕ ಮಾಡಲಾಗಿದೆ.
ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸುವಂತೆ ಅನೇಕ ಬಾರಿ ವಿವಿಧ ಸಂಘಟನೆಗಳು ಹೋರಾಟ ಮಾಡಿವೆ. ಕೆಲ ದಿನಗಳ ಹಿಂದೆ ಭಾರತ ಕಮ್ಯುನಿಸ್ಟ್ ಪಕ್ಷ ಕೂಡ ಪ್ರತಿಭಟನೆ ಮಾಡಿತ್ತು. ಆದರೆ, ಇದು ಯಾವುದಕ್ಕೂ ಸ್ಪಂದಿಸದ ಅಧಿಕಾರಿಗಳು, ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಸ್ಥಳಕ್ಕೆ ಆಗಮಿಸಿ ನಮಗೆ ಸ್ವಲ್ಪ ದಿನ ಕಾಲಾವಕಾಶ ಕೊಡಿ, ಆದಷ್ಟು ಬೇಗ ನಾವು ವೈದ್ಯರನ್ನು ನೇಮಕ ಮಾಡುತ್ತೇವೆ ಎಂದು ಹೇಳಿದ್ದರು. ಡಿಎಚ್ಒ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇದೀಗ ವೈದ್ಯರನ್ನು ನೇಮಕ ಮಾಡಿದ್ದಾರೆ.