ಚಿಕ್ಕಮಗಳೂರು:ಗೊಲ್ಲರ ಹಟ್ಟಿಯ ಮಕ್ಕಳು ಶೂ ಧರಿಸಿ ಶಾಲೆಗೆ ತೆರಳುವುದರಿಂದ ಮೈಲಿಗೆ ಆಗುತ್ತದೆ. ಹೀಗಾಗಿ ಬರಿಗಾಲಲ್ಲೇ ಶಾಲೆಗೆ ಬರುತ್ತಿದ್ದಾರೆ ಎಂಬ ಗಂಭೀರ ಆರೋಪ ಇತ್ತೀಚಿಗೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಸ್ಪಷ್ಟನೆ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಪ್ರತಿಕ್ರಿಯಿಸಿ, "ಶಾಲೆಯ ಪ್ರತಿಯೊಬ್ಬ ಮಗುವಿಗೂ ಶೂ ಹಾಗೂ ಸಮವಸ್ತ್ರ ವಿತರಿಸಿದ್ದೇವೆ. ಆಗ ಎಲ್ಲರೂ ಶೂ ಧರಿಸಿ ಶಾಲೆಗೆ ಬರುತ್ತಿದ್ದರು. ನಾನು ಶಾಲೆಗೆ ಭೇಟಿ ನೀಡಿದಾಗ ನಾಲ್ವರು ಮಕ್ಕಳು ಮಾತ್ರ ಬರಿಗಾಲಿನಲ್ಲಿ ಬಂದಿದ್ದರು. ಈ ಬಗ್ಗೆ ಶಿಕ್ಷಕರನ್ನು ವಿಚಾರಿಸಿದಾಗ, ಶೂ ಕಿತ್ತು ಹೋಗಿದೆ. ಹಾಗಾಗಿ ಹಾಕಿಕೊಂಡು ಬರಲಿಲ್ಲ ಎಂದು ಮಕ್ಕಳು ಹೇಳಿದ್ದಾರೆ. ಪ್ರತಿಯೊಬ್ಬರೂ ಶಾಲೆಗೆ ಶೂ ಧರಿಸಿಕೊಂಡು ಬರುತ್ತಾರೆ. ಈ ಶಾಲೆಯಲ್ಲಿ 71 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಆರೋಪ ಶುದ್ಧ ಸುಳ್ಳು. ಶಾಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಯಾರೋ ಬೇಕಂತಲೇ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ"ಎಂದು ಹೇಳಿದರು.