ಚಿಕ್ಕಮಗಳೂರು:ಶ್ರೀರಾಮಸೇನೆಯ 18ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಿಕ್ಕಮಗಳೂರಿನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ನಗರದ ಶಂಕರ ಮಠದಲ್ಲಿ ಮಾಲಾಧಾರಣೆ ಮಾಡುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.
ಶ್ರೀರಾಮಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿ ಹಲವರಿಂದ ಮಾಲಾಧಾರಣೆ ಆಗಿದೆ. ಸೋಮವಾರದಿಂದ ಏಳು ದಿನ ದತ್ತಮಾಲಾ ಅಭಿಯಾನ ನಡೆಯಲಿದ್ದು, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮಾಲಾಧಾರಣೆ ನಡೆಯುತ್ತಿದೆ. ಭಕ್ತರು ನವೆಂಬರ್ 13 ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗಂಗಾಧರ್ ಕುಲಕರ್ಣಿ ಇದೇ ಸಂದರ್ಭದಲ್ಲಿ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ಪ್ರತಿ ವರ್ಷ ಬರೋದು, ಹೆಣ ಇಲ್ಲದ ಗೋರಿ ನೋಡೋದು ವಾಪಸ್ ಹೋಗೋದು ಆಗಿದೆ. ಎಚ್ಚರಿಕೆ ನೀಡಿ, ನೀಡಿ, ಬೇಜಾರಾಗಿದೆ. ಧರ್ಮದ ವಿಚಾರದಲ್ಲಿ ಡ್ರಾಮಾ ಒಳ್ಳೆದಲ್ಲ, ತಕ್ಷಣ ಏನಾದರೂ ಆಗಲಿ ಎಂದು ಗಟ್ಟಿ ನಿರ್ಧಾರ ಮಾಡಿ. ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ದತ್ತಪೀಠ ಹಿಂದೂಗಳಿಗೆ ಮುಕ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು: ಪ್ರಮೋದ್ ಮುತಾಲಿಕ್
ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪರ ಪೀಠ ಹೋಗುತ್ತೆ ಎಂದು ಹೇಳಿದ್ದೆ. ಅದೇ ರೀತಿ ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪ ಪೀಠ ಕಳ್ಕೊಂಡ್ರು. ಈಗ ಬೊಮ್ಮಾಯಿಗೂ ಹೇಳ್ತಿದ್ದೀವಿ, ಮುಂದೆ ಸರ್ಕಾರ ಬರಬೇಕಂದ್ರೆ ತಕ್ಷಣ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಿ. ಇಲ್ಲವಾದರೆ, ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ದತ್ತಮಾಲಾಧಾರಣೆ ಬಳಿಕ ಗಂಗಾಧರ್ ಕುಲಕರ್ಣಿ ಹೇಳಿದರು.