ಚಿಕ್ಕಮಗಳೂರು: ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದ ಕೋತಿಯ 11ನೇ ದಿನದ ತಿಥಿ ಮಾಡಿ, ಊರಿಗೆ ಊಟ ಹಾಕಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಮುಗುಳಿ ಗ್ರಾಮದಲ್ಲಿ ನಡೆದಿದೆ.
11 ದಿನದ ಹಿಂದೆ ಕೋತಿ ಸಾವನ್ನಪ್ಪಿದ್ದಾಗಲೂ ಮುಗುಳಿ ಗ್ರಾಮದ ಜನ ಮನುಷ್ಯರು ಮೃತಪಟ್ಟಾಗ ನಡೆಸುವಂತೆಯೇ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಊರಿನ ತುಂಬಾ ಮೆರವಣಿಗೆ ಮಾಡಿ ಗ್ರಾಮದ ಭೂತನಾಥೇಶ್ವರ ದೇಗುಲದ ಪಕ್ಕದಲ್ಲಿ ಕೋತಿಯ ಅಂತ್ಯ ಸಂಸ್ಕಾರ ಮಾಡಿದ್ದರು. ಶನಿವಾರ ಕೋತಿ ಸಾವನ್ನಪ್ಪಿ 11 ದಿನವಾದ ಹಿನ್ನೆಲೆ ಮುಗುಳಿ ಗ್ರಾಮದ ಸುಮಾರು 250-300 ಮನೆಯ ಜನರೆಲ್ಲರೂ ಒಟ್ಟಿಗೆ ಸೇರಿ ಕೋತಿಯ ತಿಥಿ ಮಾಡಿದ್ದಾರೆ.
ಈ ಕೋತಿ 10 ವರ್ಷಗಳಿಂದ ಗ್ರಾಮದಲ್ಲಿ ಊರಿನ ಮಗನಂತಿತ್ತು. ಊರಿನ ಜನ ಕೋತಿಗೆ ಪ್ರೀತಿಯಿಂದ ಮಾರುತಿ ಎಂದೇ ಕರೆಯುತ್ತಿದ್ದರು. ಒಂದು ಕಾಲು ಕೂಡ ಮುರಿದು ಕುಂಟುತ್ತಾ ಓಡಾಡುತ್ತಿತ್ತು. ಗ್ರಾಮ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಮುಗುಳಿ ಗ್ರಾಮದಲ್ಲಿ ಸುಮಾರು 250-300ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರ ಮನೆಯ ಬಳಿಯೂ ಹೋಗುತ್ತಿತ್ತು. ಮಾರುತಿ ಅಂತ ಕರೆದರೆ ಹೋಗಿ ಬಾಳೆಹಣ್ಣು ಪಡೆದುಕೊಂಡು ಬರುತ್ತಿತ್ತು.