ಚಿಕ್ಕಮಗಳೂರು: ರಜೆ ಮುಗಿಸಿ ಹುಟ್ಟೂರಿನಿಂದ ಸೇವೆಗೆ ಹಿಂದಿರುಗುವಾಗ ಬಿಹಾರದ ಕಿಶನ್ಗಂಜ್ ಎಂಬಲ್ಲಿ ಮೃತಪಟ್ಟ ಯೋಧ ನಾಯಕ್ ಗಣೇಶ್ ಅಂತ್ಯಕ್ರಿಯೆ ಸ್ವಗ್ರಾಮ ಮಸಿಗದ್ದೆಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ನೆರವೇರಿದೆ. ಇಲ್ಲಿನ ಜನಸಾಮಾನ್ಯರು ಸೇರಿದಂತೆ ಸಾವಿರಾರು ಮಂದಿ ಹೆಮ್ಮೆಯ ಯೋಧನ ಅಂತಿಮ ದರ್ಶನ ಪಡೆದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದ ನಾಗಯ್ಯ-ಗಂಗಮ್ಮ ಎಂಬುವರ ಪುತ್ರ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 24 ರಂದು ರಜೆ ಹಾಕಿ ಊರಿಗೆ ಬಂದಿದ್ದ ಗಣೇಶ್ ಜೂನ್ 12ರಂದು ಸೇನೆಗೆ ಹಿಂದಿರುಗಬೇಕಿತ್ತು. ಹಾಗಾಗಿ, ಜೂನ್ 8ರಂದು ವಾಪಸ್ ಹೊರಟಿದ್ದರು. ಆದರೆ, ಸೇನೆ ತಂಡ ಸೇರುವ ಮೊದಲೇ ಜೂನ್ 11ರಂದು ಬಿಹಾರದ ಕಿಶನ್ಗಂಜ್ ಎಂಬಲ್ಲಿ ಗಣೇಶ್ ಮೃತದೇಹ ಪತ್ತೆಯಾಗಿತ್ತು.
ದೇಹದ ಮೇಲೆ ಒಂದೇ ಒಂದು ಗಾಯವಿಲ್ಲ. ಗಾಯದ ಕಲೆಯೂ ಇಲ್ಲ. ಸೇನೆಗೂ ಹೋಗಿಲ್ಲ ಎನ್ನಲಾಗಿದ್ದು,. ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯೋಧ ಗಣೇಶ್ ಜೂನ್ 11ರಂದು ಸಾವನ್ನಪ್ಪಿದ್ದರು. ಆರು ದಿನಗಳ ಬಳಿಕ ಮೃತದೇಹ ಜಿಲ್ಲೆಗೆ ಆಗಮಿಸಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ನೂರಾರು ಜನರು ಬೈಕ್ ಮೆರವಣಿಗೆ ಮೂಲಕ ಘೋಷಣೆ ಕೂಗುತ್ತ ಮೃತದೇಹ ಬರಮಾಡಿಕೊಂಡರು. ದಾರಿಯುದ್ದಕ್ಕೂ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಗಣೇಶ್ ಅಂತ್ಯಕ್ರಿಯೆ ನೆರವೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ನೆರೆದಿದ್ದ ಸಾವಿರಾರು ಜನ ನಾಯಕ್ ಗಣೇಶ್ ಅಮರ್ ರಹೇ ಎಂದು ಘೋಷಣೆ ಕೂಗಿದರು. ಸಂಗಮೇಶ್ವರಪೇಟೆ, ಕಡಬಗೆರೆ ಹಾಗೂ ಬಾಳೆಹೊನ್ನೂರಿನ ಸಾವಿರಾರು ಜನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಯೋಧನ ಅಂತಿಮ ದರ್ಶನ ಪಡೆದರು.
ಓದಿ:ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ಹೆಚ್ಚಳ; ರಾಷ್ಟ್ರೀಯ ಸಮೀಕ್ಷೆಯಲ್ಲಿ ಬಹಿರಂಗ