ಚಿಕ್ಕಮಗಳೂರು:ಜಿಲ್ಲೆಯ ಕಡೂರು ಪಟ್ಟಣದ ನಿವಾಸಿ, ರಸ್ತೆ ಬದಿಯಲ್ಲಿ ಕ್ಯಾಂಟೀನ್ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಪಟ್ಟಣದಲ್ಲಿ ಸರಿಯಾದ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲವೆಂದು ತಾವೇ ಸ್ವತಃ ಆ್ಯಂಬುಲೆನ್ಸ್ ವಾಹನ ಖರೀದಿಸಿ ಜನರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಮಂಜುನಾಥ್ ಅಲಿಯಾಸ್ ಕ್ಯಾಂಟೀನ್ ಮಂಜಣ್ಣ ಅವರ ತಂದೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ ಅದೊಂದು ದಿನ ಆರೋಗ್ಯ ಪರಿಸ್ಥಿತಿ ದಿಢೀರ್ ಹದಗೆಟ್ಟಿತ್ತು.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಇತ್ತು. ಪಟ್ಟಣದಲ್ಲಿ ಸರಿಯಾದ ಆ್ಯಂಬುಲೆನ್ಸ್ ವ್ಯವಸ್ಥೆ ಇರದ ಕಾರಣ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಅವರು ಪ್ರಾಣ ಕಳೆದುಕೊಂಡಿದ್ದರು. ಇದನ್ನು ಮನಗಂಡ ಮಂಜಣ್ಣ ತಮ್ಮ ಪರಿಸ್ಥಿತಿ ಭವಿಷ್ಯದಲ್ಲಿ ಬೇರೆ ಯಾರಿಗೂ ಬರಕೂಡದು ಎಂದು ತೀರ್ಮಾನಿಸಿ ಜನರ ಸೇವೆಗಾಗಿ ತಮ್ಮ ತಂದೆಯ ಹೆಸರಿನಲ್ಲಿಯೇ 5 ಲಕ್ಷ ರೂಪಾಯಿ ಮೊತ್ತದ ಆ್ಯಂಬುಲೆನ್ಸ್ ಖರೀದಿ ಮಾಡಿದ್ದು ಇದೀಗ ಪಟ್ಟಣದಲ್ಲಿ ಈ ಆಂಬುಲೆನ್ಸ್ 24x7 ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಕ್ಯಾಂಟೀನ್ ಮಂಜಣ್ಣ ಜನಸಾಮಾನ್ಯರ ಪಾಲಿಗೆ ಆಪತ್ಭಾಂಧವರಾಗಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕ್ಯಾಂಟೀನ್ ಮಂಜಣ್ಣ, "ನನ್ನ ತಂದೆ ಐದು ವರ್ಷಗಳ ಹಿಂದೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅದೊಂದು ದಿನ ಅವರ ಆರೋಗ್ಯ ದಿಢೀರ್ ಏರುಪೇರಾಗಿತ್ತು. ತಕ್ಷಣವೇ ಶಿವಮೊಗ್ಗದ ಮಲೆನಾಡು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಸರ್ಕಾರಿ ಕ್ಯಾಂಟೀನ್ ಕರೆ ಮಾಡಿದರೆ ಆ ಸಮಯದಲ್ಲಿ ಬೇರೊಂದು ಕಡೆ ಹೋಗಿದ್ದೇವೆ ಎಂದರು. ಇನ್ನು ಖಾಸಗಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಹೆಚ್ಚಿನ ಹಣ ಕೇಳಿದರು. ಸಕಾಲದಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಅವರು ಕೊನೆಯುಸಿರೆಳೆದರು. ಅಲ್ಲದೇ ಕೋವಿಡ್ ಸಂದರ್ಭದಲ್ಲಿಯೂ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದೆ ಅದೆಷ್ಟೋ ಜನರು ಸಾವಿಗೀಡಾಗಿದ್ದರು".