ಚಿಕ್ಕಮಗಳೂರು :ಊರೊಳಗೆ ದಲಿತ ಯುವಕ ಬಂದ ಎಂದು ಹಲ್ಲೆ ನಡೆಸಿದ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನೊಂದೆಡೆ, ಊರಿನ ದೇವಾಲಯಕ್ಕೆ ಬೀಗ ಬಿದ್ದಿದೆ.
ತರೀಕೆರೆ ತಾಲೂಕಿನ ಗೇರು ಮರಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಜನವರಿ 1ರಂದು ಜೆಸಿಬಿ ಕೆಲಸದ ನಿಮಿತ್ತ ದಲಿತ ಯುವಕ ಬಂದಿದ್ದ. ಆತ ಕೆಲಸ ಮಾಡುವಾಗ ಕೇಬಲ್ ಕಟ್ ಆಗಿದ್ದಕ್ಕೆ ಗ್ರಾಮದ ಹಲವರು ಯುವಕನಿಗೆ ಥಳಿಸಿ, ಆತನ ಬಳಿ ಇದ್ದ 20,000 ರೂ. ಹಣವನ್ನು ದಂಡವಾಗಿ ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಇದನ್ನು ಖಂಡಿಸಿ ದಲಿತ ಸಂಘಟನೆಗಳು ಗ್ರಾಮಕ್ಕೆ ಪ್ರವೇಶ ಮಾಡಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಗ್ರಾಮ ಅಪವಿತ್ರ ಆಯ್ತು ಎಂದು ಭಾವಿಸಿ, ಗೊಲ್ಲರಹಟ್ಟಿಯ ಕೆಲ ಗ್ರಾಮಸ್ಥರು ಅಲ್ಲಿನ ಎರಡು ದೇವಾಲಯಕ್ಕೆ ಬೀಗ ಹಾಕಿದ್ದಾರೆ.
ಈ ಕುರಿತು ತರೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಇತರ ಹನ್ನೊಂದು ಆರೋಪಿಗಳು ತಲೆಮರೆಸಿಕೊಂಡಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.