ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಚಿಕ್ಕಮಗಳೂರು :ಬಿಜೆಪಿಯ ಭದ್ರಕೋಟೆಯಾದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದೆ. ಹಿಂದುತ್ವದ ಫೈಯರ್ ಬ್ರಾಂಡ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಸಿ ಟಿ ರವಿ ಸೇರಿದಂತೆ ಹಾಲಿ ನಾಲ್ಕು ಶಾಸಕರನ್ನ ಸೋಲಿಸುವ ಮೂಲಕ ಬಿಜೆಪಿ ಕೋಟೆಯನ್ನ ಕಾಂಗ್ರೆಸ್ ಬೀಳಿಸಿದೆ. ಇದೀಗ ಸಿ ಟಿ ರವಿ ಸೋಲಿನ ಬಗ್ಗೆ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಬಿಜೆಪಿಯಿಂದ ಸಿ ಟಿ ರವಿ ಹೊರಗೆ ಕಳಿಸಿದ್ರು. ಈಗ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್‍ನಲ್ಲಿ ಬೂತ್ ಕಮಿಟಿ-ಸಂಘಟನೆ ಇರಲಿಲ್ಲ: ಒಳಒಪ್ಪಂದ ರಾಜಕೀಯ ಇತ್ತು ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಆದರೆ ಏನೂ ಮಾಡಲು ಆಗಲ್ಲ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‍ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ. ಹೀಗಾಗಿ ಇವೆಲ್ಲವುಗಳನ್ನು ಸರಿಪಡಿಸಿಕೊಂಡು ಚುನಾವಣೆ ಎದುರಿಸುವುದು ಸಾಧ್ಯವಾಗಲಿಲ್ಲ. ಹೀಗಾಗಿ ನಮಗೆ ಸೋಲಾಗಿದೆ. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿ.ಪಂ, ತಾ.ಪಂ ಎಲೆಕ್ಷನ್ ಮಾಡುತ್ತೇವೆ. ಇನ್ನು ಹೆಚ್ಚಿನ ಸಂಘಟನೆ ಮಾಡಿಕೊಂಡು ಪಕ್ಷವನ್ನು ಇನ್ನಷ್ಟು ಸದೃಢ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ಗೆ ಬೇಕಾದ್ರೆ ವೋಟ್ ಹಾಕಿ, ಜೆಡಿಎಸ್ಗೆ ಹಾಕಬೇಡಿ ಎಂದು ಕ್ಯಾಂಪೇನ್ ಮಾಡಿದ್ರು. ಅದೇನಾದ್ರು ನಿಮಗೆ ಚುನಾವಣೆಯಲ್ಲಿ ಹೊಡೆತ ಬಿತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ತರ ಮಾಡಿದ್ದಾರೆ. ಎಲ್ಲರೂ ಅಲ್ಲ. ಬಿಜೆಪಿಯಲ್ಲಿ ಕೆಲವರು ಲೀಡರ್ಶಿಪ್ ವಹಿಸಿಕೊಂಡವರು ಆ ರೀತಿ ಮಾಡಿದ್ದಾರೆ ಅಂತ ಎಲ್ಲಾ ಸಾರ್ವಜನಿಕರಿಗೆ ಗೊತ್ತಾಗಿದೆ ಎಂದರು.
ಬಿಜೆಪಿಯನ್ನು ಬಿಟ್ಟಿರುವುದು ಏನಾದ್ರು ನಿಮ್ಮ ಸೋಲಿಗೆ ಕಾರಣವಾಗಿರಬಹುದಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯನ್ನು ನಾನೇ ಕಟ್ಟಿ ಬೆಳೆಸಿದ್ದು, ನಾನೇ ಮೂಡಿಗೆರೆಯ ಗಲ್ಲಿ ಗಲ್ಲಿಯಲ್ಲಿ ಕಟ್ಟಿ ಬೆಳೆಸಿರುವುದು. ನಾನು ಯಾರನ್ನೂ ಕರೆಯಲು ಹೋಗಲಿಲ್ಲ. ನಾನು ನನ್ನ ಪಾಡಿಗೆ ಬಂದಿದ್ದೇನೆ ಅಷ್ಟೇ ಎಂದರು.
ಸಿ ಟಿ ರವಿಯವರ ಈ ವಿಚಾರಗಳು ಕೆಲಸ ಮಾಡಲ್ಲ: ಸಿ ಟಿ ರವಿಯವರು ನನ್ನನ್ನು ಬಿಜೆಪಿ ಪಕ್ಷದಿಂದ ಹೊರ ಕಳುಹಿಸಿದ್ದಾರೆ. ಆದರೆ, ಜನ ಅವರನ್ನು ಕ್ಷೇತ್ರದಿಂದಲೇ ಹೊರಗೆ ಕಳುಹಿಸಿದ್ದಾರೆ. ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರು ಸಾವಿರ ಅಷ್ಟೇ. ಚಿಕ್ಕಮಗಳೂರು ಇನ್ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ. ಸಿ ಟಿ ರವಿ ಅವರು ಚುನಾವಣೆಯ ಸಮಯದಲ್ಲಿ ದತ್ತಮಾಲೆ, ಅಹಿತಕರ ಘಟನೆ ಇಟ್ಕೊಂಡು ಪ್ರಚಾರ ನಡೆಸಿದರು. ಇನ್ಮುಂದೆ ಸಿಟಿ ರವಿಯವರ ಈ ವಿಚಾರಗಳು ಕೆಲಸ ಮಾಡಲ್ಲ. ನನ್ನನ್ನು ಪಕ್ಷದಿಂದ ಕೈ ಬಿಟ್ಟರೆ ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದು ಕ್ಷೇತ್ರವನ್ನು ಸೋಲುತ್ತಿರಿ ಎಂದು ಜನರೇ ಹೇಳಿದ್ದರು. ಈಗ ಆ ಮಾತು ಸತ್ಯವಾಗಿದೆ ಎಂದರು. ಯಡಿಯೂರಪ್ಪ ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ರೆ ಬಿಜೆಪಿ 50 ಸೀಟ್ ಅಷ್ಟೇ ಬರುತ್ತಿತ್ತು ಎಂದು ಟೀಕಿಸಿದರು.
ಇದನ್ನೂ ಓದಿ:ಅತಿಯಾದ ಆತ್ಮವಿಶ್ವಾಸ, ಹೊಸ ಪ್ರಯೋಗ ಸೋಲಿಗೆ ಕಾರಣ: ಸಿ.ಟಿ.ರವಿ