ಚಿಕ್ಕಮಗಳೂರು: "ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು ನಾವು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾದರೂ ನಮ್ಮ ಜೊತೆ ಬರಬಹುದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ. ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವದ ರಾಷ್ಟ್ರ ಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದ್ರೂ ಬರಬಹುದು. ಎನ್ಡಿಎ ಹಾಗೂ ಬಿಜೆಪಿ ಜೊತೆ ಯಾರು ಬೇಕಾದ್ರೂ ಬರಬಹುದು" ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.
"ಜೆಡಿಎಸ್ ಜೊತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರನ್ನೂ ದೂರ ಇಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಲ್ಲ" ಎಂದರು.
ಲೋಕಸಭೆ ಚುನಾವಣೆಗೆ ವಿಪಕ್ಷಗಳು ಒಟ್ಟಾಗಿರುವ ಬಗ್ಗೆ ಮಾತನಾಡಿ, "ಕಾಡಿನ ರಾಜ ಸಿಂಹವನ್ನು ಬೆದರಿಸೋಕೆ ಆಗುತ್ತಾ?. ನೂರು ನರಿಗಳು ಊಳಿಟ್ಟರೂ ಕಾಡಿನ ರಾಜ ಸಿಂಹ ಅದರ ದಾರಿಯಲ್ಲಿ ನಡೆಯುತ್ತದೆ. ನೂರು ವಿಪಕ್ಷಗಳಿಗೆ ಭಯ ಇದೆ, ಅದಕ್ಕೆ ಒಂದಾಗಿದ್ದಾರೆ. ಅವರ ಒಗ್ಗಟ್ಟು ದೇಶದ ಹಿತದೃಷ್ಟಿಯಿಂದಲ್ಲ. ಹಾಗಾಗಿ, ಅವರಿಗೆ ಹೆದರುವ ಅಗತ್ಯವಿಲ್ಲ. ಈಗ ನರಿಗಳ ಸಂಖ್ಯೆ ಕಡಿಮೆಯಾಗಿದೆ, ಅಪರೂಪಕ್ಕೆ ಸಿಗುತ್ತದೆ. ಮೊದಲು ಮಲೆನಾಡ ಗದ್ದೆ ಬಯಲಲ್ಲಿ ನರಿಗಳು ಇರ್ತಿದ್ವು" ಎಂದು ವ್ಯಂಗ್ಯವಾಡಿದರು.