ಚಿಕ್ಕಮಗಳೂರು:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರುಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದರು. ಇದೀಗ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರು ಕೂಡ ಶೃಂಗೇರಿಗೆ ಆಗಮಿಸಲಿದ್ದಾರೆ. ಇಂದು ರಾತ್ರಿ ಶೃಂಗೇರಿ ತಲುಪಲಿರುವ ಎಚ್ಡಿಕೆ ಶಾರಂದಾಬೆಯ ದರ್ಶನವಾದ ಬಳಿಕ ಉಭಯ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.
ನಾಳೆ ಬೆಳಗಿನ ಪೂಜೆಯಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದು, ಆ ನಂತರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಗೆ ಶೃಂಗೇರಿ ಮಠದಿಂದ ಚಾಲನೆ ನೀಡಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ದಿನಗಳ ಕಾಲ ಪಂಚರತ್ನ ಯಾತ್ರೆ ನಡೆಯಲಿದೆ. ಇತ್ತೀಚೆಗೆ ಕುಮಾರಸ್ವಾಮಿ ಅವರು ಶೃಂಗೇರಿ ಮಠ ಮತ್ತು ಬ್ರಾಹ್ಮಣರ ವಿರುದ್ಧ ಹೇಳಿಕೆ ನೀಡಿದ್ದರು. ಇದು ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಹೆಚ್ಡಿಕೆ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದು, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುತ್ತಾರಾ? ಎಂದು ಕಾದುನೋಡಬೇಕಿದೆ.
'ಶಾಸಕರನ್ನು ಸಚಿವರನ್ನಾಗಿ ಮಾಡುವೆ..' ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಮುಂದುವರೆಸಿದೆ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಜಿಲ್ಲೆಯ ಜನತೆಗೆ ಹೆಚ್ಡಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿರುವ ಅವರು, "ಜನಪರ ಕಾಳಜಿಯುಳ್ಳ ನನ್ನ ತಂಗಿ ಶಾರದಾ ಪೂರಾರಯ ನಾಯ್ಕ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡಿ. ಇದರಿಂದಾಗಿ ಈ ಕ್ಷೇತ್ರದ ಜನತೆಗೆ ಒಳ್ಳೆಯ ಅವಕಾಶ ದೊರೆಯಲಿದೆ" ಎಂದು ಹೇಳಿದ್ದಾರೆ.