ಚಿಕ್ಕಮಗಳೂರು: ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ದರ್ಶನ್ ಅವರು ಹುಲಿ ಉಗುರು ಮಾದರಿ ಪೆಂಡೆಂಟ್ ಇರುವ ಸರ ಹಾಕಿಕೊಂಡ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು.
ಅರಣ್ಯಾಧಿಕಾರಿ ದರ್ಶನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಲ್ದೂರು ಅರಣ್ಯ ಕಛೇರಿಗೆ ಸ್ಥಳೀಯರಾದ ಸುಪ್ರೀತ್ ಅರೇನೂರು ಮತ್ತು ಖಾದರ್ ಎಂಬವರು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ದರ್ಶನ್ ಅರಣ್ಯ ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಬಾರದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರನ್ನು ಇಲಾಖೆಯ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಬಳಿಕವೂ ಕೂಡ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ದರ್ಶನ್ ಬಂಧನಕ್ಕೆ ಹುಡುಕಾಟ ನಡೆಸಿದ್ದರು. ಇಂದು ಕೊಪ್ಪ ವಿಭಾಗದ ಅರಣ್ಯ ಅಧಿಕಾರಿಗಳು ಎನ್.ಆರ್.ಪುರದಲ್ಲಿ ಬಂಧಿಸಿ ಕೊಪ್ಪ ಅರಣ್ಯ ಉಪವಿಭಾಗ ಕಛೇರಿಗೆ ಕರೆದೊಯ್ದಿದ್ದಾರೆ.
ದೂರಿನಲ್ಲಿ ಏನಿತ್ತು?:ದರ್ಶನ್ ಈ ಹಿಂದೆ ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಪೆಂಡೆಂಟ್ ಇರುವ ಚಿನ್ನದ ಸರ ಧರಿಸಿ ತೆಗೆಯಲಾಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಇತ್ತೀಚೆಗೆ ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದ ಮೇಲೆ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಬಂಧನದ ಬಳಿಕ ಸಾಮಾಜಿಕ ಜಾಲತಾಣಗಳಿಂದ ತಮ್ಮ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಸ್ಥಳೀಯರಾದ ಸುಪ್ರೀತ್ ಅರೇನೂರು ಮತ್ತು ಖಾದರ್ ದೂರಿನಲ್ಲಿ ತಿಳಿಸಿದ್ದರು. ಅರಣ್ಯ ಇಲಾಖೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯ ಸೋಷಿಯಲ್ ಮೀಡಿಯಾ ಖಾತೆಯನ್ನು ಸೈಬರ್ ಕ್ರೈಂ ಪೊಲೀಸರ ಮೂಲಕ ತನಿಖೆಗೆ ಒಳಪಡಿಸಬೇಕು. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.
ಪ್ರತ್ಯೇಕ ಪ್ರಕರಣ, ಇಬ್ಬರು ಅರ್ಚಕರ ಬಂಧನ:ಹುಲಿ ಉಗುರಿನಿಂದ ಡಾಲರ್ ಮಾಡಿ ಕತ್ತಿಗೆ ಹಾಕಿಕೊಂಡಿದ್ದ ಆರೋಪದ ಮೇಲೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಲ್ಲಿ ಇಬ್ಬರು ಅರ್ಚಕರನ್ನು ಗುರುವಾರ ಬಂಧಿಸಲಾಗಿತ್ತು. ಬಾಳೆಹೊನ್ನೂರು ಸಮೀಪದ ಖಾಂಡ್ಯದ ಪ್ರಸಿದ್ಧ ಮಾರ್ಕಂಡೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್ ಬಂಧಿತ ಆರೋಪಿಗಳು. ಬಳಿಕ ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯವು ಬಂಧಿತರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು: ಹುಲಿ ಉಗುರಿನ ಮಾದರಿ ಪೆಂಡೆಂಟ್ ವಶಕ್ಕೆ