ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಡ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಬಳಿಯ ಮಾವಿನ ಹೊಲ ಬಳಿ ಧ್ಯಾನ್ ಚಂದ್ ಅವರ ಮನೆ ಕಳೆದ ಒಂದು ವಾರಗಳ ಕಾಲ ಸುರಿದ ಮಳೆಗೆ ಬಿರುಕು ಬಿಟ್ಟಿತ್ತು. ಮನೆಯ ಪಕ್ಕದಲ್ಲಿದ್ದಂತಹ ಅರ್ಧ ಎಕರೆ ಜಾಗಕ್ಕೆ ಕಳೆದ 15 ವರ್ಷಗಳಿಂದ ಬೇಲಿ ಹಾಕಿಕೊಂಡಿದ್ದರು. ನಾಳೆ ಆ ಜಾಗದಲ್ಲಿ ಹೊಸ ಮನೆ ಕಟ್ಟಬೇಕು ಎಂದು ಜಾಗ ಮಟ್ಟ ಮಾಡಿದ್ದರು. ಇದನ್ನು ನೋಡಿದ್ದಂತಹ ಅರಣ್ಯ ಇಲಾಖೆ ಸಿಬ್ಬಂದಿ ಅರ್ಧ ಎಕರೆಗೆ ಹಾಕಿದ್ದಂತಹ ಬೇಲಿಯನ್ನು ಕಿತ್ತು ಎಸೆದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ದರ್ಪ ಧ್ಯಾನಚಂದ್ ಹಾಗೂ ಸ್ಥಳೀಯರು ಎಷ್ಟೇ ಮನವಿ ಮಾಡಿದ್ರು ಬಿಡದ ಅರಣ್ಯ ಸಿಬ್ಬಂದಿ ಎಲ್ಲ ಬೇಲಿಯನ್ನು ಕಿತ್ತು ಎಸೆದಿದ್ದಾರೆ. ಈಗಾಗಲೇ ಧ್ಯಾನ್ ಚಂದ್ ಅವರು 53 ಫಾರಂ ನಡಿ ಈ ಜಾಗಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿ ಜಾಗವನ್ನು ತೆರವು ಮಾಡಿದ್ದಾರೆ.
ಆದರೆ, ಸುತ್ತ ಮುತ್ತಲ ಪ್ರದೇಶದಲ್ಲಿ ಬಲಿಷ್ಠರು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಾಗವನ್ನು ಏಕೆ ಬಿಡಿಸುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಅರ್ಧ ಎಕರೆ ಮೇಲೆ ನಿಮ್ಮ ಕಣ್ಣು ಏಕೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಇವತ್ತು ಬೇಲಿ ಕಿತ್ತು ಹಾಕಿ, ನಾಳೆ ಮತ್ತೆ ಹೊಸ ಬೇಲಿ ಹಾಕುತ್ತೇವೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.