ಚಿಕ್ಕಮಗಳೂರು :ನಗರದ ಹೊರ ವಲಯದಲ್ಲಿರುವ ಚುರ್ಚೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಒಂಟಿ ಸಲಗ ರೊಚ್ಚಿಗೆದ್ದು ತಿರುಗಿ ಬಿದ್ದಾಗ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ವೇಳೆ ಮಿಸ್ ಫೈರ್ ಆಗಿದ್ದು, ಎದುರಿಗಿದ್ದ ಸಿಬ್ಬಂದಿ ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಚುರ್ಚೆಗುಡ್ಡ ಪ್ರದೇಶದಿಂದ ಬೀಕನಹಳ್ಳಿ ಹಂಪಾಪುರ ಭಾಗದ ಹೊಲ, ಗದ್ದೆಗಳಲ್ಲಿ ದಾಳಿ ಮಾಡುತ್ತಿದ್ದ ಒಂಟಿ ಸಲಗ ಪೈರನ್ನು ಲೂಟಿ ಮಾಡುತ್ತಿತ್ತು. ಈ ಸಲಗದ ಹಾವಳಿ ತಪ್ಪಿಸುವಂತೆ ರೈತರು ಒತ್ತಾಯ ಮಾಡಿದ ಹಿನ್ನೆಲೆ ಅರ್ಜುನ, ಭೀಮಾ ದಸರಾ ಆನೆಗಳೊಂದಿಗೆ ಕಾರ್ಯಾಚರಣೆಗಿಳಿದಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.
ಡಿಸಿಎ-ಕ್ರಾಂತಿ ನೇತೃತ್ವದಲ್ಲಿ ಮೂರು ತಂಡಗಳಲ್ಲಿ ಚುರ್ಚೆಗುಡ್ಡದಲ್ಲಿ ಕಾರ್ಯಾಚರಣೆಗಿಳಿದಿದ್ದ 30ಕ್ಕೂ ಹೆಚ್ಚು ಸಿಬ್ಬಂದಿ ಬೆಳಗ್ಗೆ ಬೀಕನಹಳ್ಳಿ ಕಾವಲ್‌ನಿಂದ 10.30 ಕ್ಕೆ ಹೊರಟು ಆನೆ ಹೆಜ್ಜೆ ಗುರುತಿನ ಜಾಡು ಹಿಡಿದು ಗುಡ್ಡದಲ್ಲಿ ನಾಲ್ಕಾರು ಕಿ. ಮೀ ನಡೆದು ಕಾಡಾನೆ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು. ಒಂದು ತಂಡ ಅರಣ್ಯದೊಳಗೆ ಮೂರು ನಾಲ್ಕು ಕಿ. ಮೀ ಪ್ರದಕ್ಷಿಣೆ ಹಾಕುವ ವೇಳೆ ಕಾಡಿನಲ್ಲಿದ್ದ ಒಂಟಿ ಸಲಗ ಬೆಂಡೆ ಹಟ್ಟಿ ದುರ್ಗಮ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ.
ಸಿಬ್ಬಂದಿ ಶಸ್ತ್ರಸಜ್ಜಿತರಾಗಿ ಪಟಾಕಿ ಸಿಡಿಸುತ್ತ ಕಾಮೇನಹಳ್ಳಿ ಅರಣ್ಯ ಪ್ರದೇಶದತ್ತ ಮೂರು ನಾಲ್ಕು ಕಿ. ಮೀ ಡ್ರೈವ್ ಮಾಡುವ ವೇಳೆ ಗುಡ್ಡ ಏರುತ್ತಿದ್ದ ಕಾಡಾನೆ ನಿತ್ರಾಣಗೊಂಡು ತಿರುಗಿ ಬಿದ್ದಾಗ ಸಮೀಪದಲ್ಲೆ ಇದ್ದ ಭೀಮಾರ್ಜುನರನ್ನು ಕರೆ ತಂದಿದ್ದ ಲಾರಿ ಚಾಲಕ ಯೋಗೀಶ್, -ರೆಸ್ಟರ್ ವಿಶ್ವನಾಥ್ ದಿಕ್ಕುತೋಚದೆ ಬಿದ್ದು, ಎದ್ದು 'ಆನೆ ತುಳಿತು ಓಡ್ರೋ, ಹೊಡಿತು ಓಡ್ರೋ' ಎಂದು ಕೂಗಿದಾಕ್ಷಣ ಎದುರಿನಲ್ಲಿದ್ದ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಈ ವೇಳೆ ಯೋಗೀಶ್ ಕಾಲಿಗೆ ಗುಂಡು ತಾಗಿ ಗಾಯಗೊಂಡಿದ್ದಾರೆ. ಗುಂಡಿನ ಶಬ್ದಕ್ಕೆ ಮುಂದೆ ಸಾಗಿದ ಕಾಡಾನೆ ಕಂಡು ನಿಟ್ಟುಸಿರು ಬಿಟ್ಟ ಯೋಗೀಶ್, ವಿಶ್ವನಾಥ್, ಗಾರ್ಡ್‌ಗಳಾದ ಪುರುಷೋತ್ತಮ್, ಮಲ್ಲಿಕಾರ್ಜುನ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿದ್ದ ಯೋಗೀಶ್ ಅವರನ್ನು ಆಂಬುಲೆನ್ಸ್ ಮೂಲಕ ಕರೆತಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಡಿ ಕೋಟೆಯಿಂದ ಭಾನುವಾರ ರಾತ್ರಿ ಆನೆಗಳೊಂದಿಗೆ ಆಗಮಿಸಿದ್ದ ಮಾವುತರು ಮತ್ತು ಕವಾಡಿಗಳು ಆನೆಗಳಿಗೆ ಪೂಜೆ ಸಲ್ಲಿಸಿದ ನಂತರ ಕಾರ್ಯಾಚರಣೆಗಿಳಿದು ಬೀಕನಹಳ್ಳಿ ಕಾವಲ್‌ನಲ್ಲಿ ಅರ್ಜುನ, ಭೀಮ ಆನೆಗಳೊಂದಿಗೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.
ಓದಿ:ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ: 1 ಲಕ್ಷದ 50 ಸಾವಿರ ರೂ. ದಂಡ