ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಅರಣ್ಯ ವಲಯದ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕಾಡಾನೆ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಮೇಲೆ ಒತ್ತಡ:ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಕಾಡಾನೆಯಿಂದ ಆನೆ ನಿಗ್ರಹ ಪಡೆಯ ನೌಕರ ಕಾರ್ತಿಕ್ ಗೌಡ ಎಂಬುವವರು ಸಾವನ್ನಪ್ಪಿದ್ದರು. ಆ ಸಂದರ್ಭ ಸ್ಥಳೀಯರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕೆಂದು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು. ಪ್ರತಿಕ್ರಿಯೆಯಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದ ಮೂರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಭರವಸೆ ನೀಡಿದ್ದರು. ಈ ಸಂಬಂಧ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಆದೇಶ:ಈ ವಿಚಾರವಾಗಿ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಸಹ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ಅರಣ್ಯ ಉಪವಿಭಾಗದ ಮೂಡಿಗೆರೆ ವಲಯದ ಊರುಬಗೆ, ಗೌಡಹಳ್ಳಿ, ಬೈರಾಪುರ, ಹೊಸಕೆರೆ, ಮೇಕನಗದ್ದೆ ಭಾಗದಲ್ಲಿ ಸಂಚರಿಸುತ್ತಾ, ಆಸ್ತಿಪಾಸ್ತಿ ಮತ್ತು ಜನರ ಜೀವ ಹಾನಿಗೆ ಕಾರಣವಾಗಿರುವ ಮೂರು ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆ ಹಿಡಿಯಬೇಕು. ಜೊತೆಗೆ ರೆಡಿಯೋ ಕಾಲರಿಂಗ್ ಆಳವಡಿಸಿ ಭದ್ರಾ ಹುಲಿ ಸಂರಕ್ಷಿತಾ ಪ್ರದೇಶದ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆದೇಶ ನೀಡಿದ್ದಾರೆ.