ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾನವೀಯತೆ ಮರೆತು ಒತ್ತುವರಿ ತೆರವು ಹೆಸರಿನಲ್ಲಿ ಕಾಫಿ ಗಿಡ ಹಾಗೂ ಬೃಹತ್ ಮರಗಳನ್ನೇ ಕಡಿದು ಹಾಕಿರುವ ಘಟನೆ ನಡೆದಿದೆ.
ಒತ್ತುವರಿ ತೆರವು ಹೆಸರಲ್ಲಿ ಕಾಫಿ ಗಿಡಗಳ ಮಾರಣಹೋಮ ನಡೆಸಿದ ಅರಣ್ಯ ಇಲಾಖೆ ಚಿಕ್ಕಮಗಳೂರು ತಾಲೂಕಿನ ಮಸಗಲಿ ಗ್ರಾಮದಲ್ಲಿ ಹತ್ತಾರು ಕುಟುಂಬಗಳು ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡು ವಾಸ ಮಾಡುತ್ತಿವೆ. ಇದರ ಜೊತೆಗೆ ಸಣ್ಣ ಪುಟ್ಟ ಕಾಫಿ ತೋಟವನ್ನು ನಿರ್ವಹಿಸಿಕೊಂಡು ಹೋಗುತ್ತಿರುವ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ನಡುವೆ ಹಲವಾರು ವರ್ಷಗಳಿಂದ ಭೂ ಒತ್ತುವರಿಯ ಜಟಾಪಟಿ ನಡೆಯುತ್ತಿದೆ.
ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಏಕಾಏಕಿ ಒತ್ತುವರಿ ತೆರವು ಮಾಡುವ ಕೆಲಸ ಮಾಡಿದ್ದು, ಈ ವೇಳೆ ಕಾಫಿ ಹಾಗೂ ಇತರೆ ಮರಗಳನ್ನು ಸಂಪೂರ್ಣ ನಾಶ ಮಾಡಿದ್ದಾರೆ.
ಈ ಘಟನೆ ನಡೆಯುತ್ತಿದ್ದಾಗ ಈ ಗ್ರಾಮದ ಮಹಿಳೆಯರ ರೋಧನ ಮುಗಿಲು ಮುಟ್ಟುವಂತಿತ್ತು. ಅಲ್ಲದೆ ಗಿಡ ಮರಗಳ ತೆರವು ಮಾಡದಂತೆ ಗೋಳಾಡುತ್ತಿದ್ದರು.
ಒತ್ತುವರಿ ತೆರವು ಮಾಡಿದ ಅರಣ್ಯಾಧಿಕಾರಿಗಳು ಗಿಡ ಹಾಗೂ ಮರಗಳನ್ನು ಕಡಿದು ಹಾಕಿದ್ದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒತ್ತುವರಿ ತೆರವು ಹೆಸರಿನಲ್ಲಿ ಅರಣ್ಯ ಇಲಾಖೆಯೇ ಗಿಡ-ಮರಗಳ್ನು ನಾಶ ಮಾಡಿದ್ದೆಷ್ಟು ಸರಿ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.