ಚಿಕ್ಕಮಗಳೂರು:ಇಳಿ ಸಂಜೆಯಲ್ಲಿ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಕಾಲು ಜಾರಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಜಲಪಾತದಲ್ಲಿ ನಡೆದಿದೆ.
ಸೆಲ್ಫಿ ತೆಗೆಯುವಾಗ ಕಾಲು ಜಾರಿ ಬಿದ್ದ ಯುವಕ ಸುಮಾರು 80 ಅಡಿ ಆಳಕ್ಕೆ ಬಿದ್ದಿದ್ದಾನೆ. ನೀರಿನ ಜೊತೆಯೇ ಬಿದ್ದಿದ್ದರಿಂದ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಯುವಕನ ಕೈ-ಕಾಲು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಅಭಿಷೇಕ್ನನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಕಂಪನಿಯೊಂದರ ಟವರ್ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿ ತುಮಕೂರು ಜಿಲ್ಲೆ ಪಾವಗಡ ಮೂಲದ ಮೂವರು ಯುವಕರಿದ್ದರು. ಸಂಜೆ 7 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟಿಯ ಆಲೇಕಾನ್ ಜಲಪಾತ ಬಂದ ವೇಳೆ ಸೆಲ್ಫಿ ತೆಗೆಯುವ ಭರದಲ್ಲಿ ಅಭಿಷೇಕ್ ಕಾಲು ಜಾರಿ ಜಲಪಾತದ ಪ್ರಪಾತಕ್ಕೆ ಬಿದ್ದಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಠಾಣೆ ಪೋಲಿಸರು ಹಾಗೂ ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲೇಖಾನ್ ಜಲಪಾತದ ಬಳಿ ಈ ಹಿಂದೆ ಕೂಡ ಹಲವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ.
ಜಲಪಾತದ ಬಳಿ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು. ಆದರೆ, 2019ರಲ್ಲಿ ಸುರಿದ ಮಳೆಗೆ ಸೂಚನಾ ಫಲಕ ಕೊಚ್ಚಿ ಹೋಗಿದೆ. ಈ ಹಿನ್ನೆಲೆ ಜಲಪಾತಕ್ಕೆ ಪ್ರವಾಸಿಗರು ಇಳಿಯುವುದು ಹೆಚ್ಚಾಗಿದೆ. ಜಲಪಾತದ ಬಳಿ ಸಂಬಂಧಪಟ್ಟ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.