ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ ಚಿಕ್ಕಮಗಳೂರು: ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಸಂಬಂಧ ಜಿಲ್ಲಾ ಎಸ್ಪಿಗೆ ದೂರು ಸಲ್ಲಿಸಿದ್ದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹರೀಶ್ ಕೆಂಗಳಹಳ್ಳಿ, ಗುರು ಪಾಟೀಲ್, ಸುವರ್ಣಗಿರಿ ಕುಮಾರ್ ಎಂಬವರ ಮೇಲೆ ಕೇಸ್ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ :ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಇಲ್ಲ: ಶಾಸಕ ಸಿ.ಟಿ. ರವಿ
ಹರೀಶ್ ಕೆಂಗಳಹಳ್ಳಿ ಕಾಂಗ್ರೆಸ್ ಐಟಿ ಸೆಲ್‍ನ ಕಾರ್ಯದರ್ಶಿಯಾಗಿದ್ದು, ಗುರುಪಾಟೀಲ್ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದಾರೆ. ಸುವರ್ಣಗಿರಿ ಕುಮಾರ್ ಎಂಬಾತ ಕಾಂಗ್ರೆಸ್‍ನ ಕಾರ್ಯದರ್ಶಿಯಾಗಿದ್ದು, ಈ ಮೂವರು ಆರೋಪಿಗಳು ಸಿ ಟಿ ರವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು, ಶಾಸಕರು ಲಿಂಗಾಯತ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಪತ್ರಿಕೆಯಲ್ಲಿ ವರದಿ ಬಂದಿರುವಂತೆ ನಕಲಿ ಸುದ್ದಿಯನ್ನು ಸೃಷ್ಟಿಸಿ ಅಪ ಪ್ರಚಾರ ಮಾಡಿದ್ದರು. ಈ ಸಂಬಂಧ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಶಾಸಕ ಸಿ ಟಿ ರವಿ ಅವರು ಲಿಂಗಾಯತ ಸಮುದಾಯದ ವಿರುದ್ಧ ನೀಡಿದ್ದಾರೆಂಬ ಹೇಳಿಕೆ ಸುಳ್ಳು ಎಂಬುದನ್ನು ರುಜುವಾತು ಮಾಡಿದ್ದಾರೆ ಎಂದರು.
ಇದನ್ನೂ ಓದಿ :ಅವರು ಹೇಳಿದ ಮಾತುಗಳೇ ಅವರಿಗೆ ತಿರುಗುಬಾಣವಾಗುತ್ತವೆ: ಡಿಕೆಶಿ ವಿರುದ್ಧ ಸಿ ಟಿ ರವಿ ವಾಗ್ದಾಳಿ
ಸುಳ್ಳು ಸುದ್ದಿ ಹಬ್ಬಿಸಿ ಅಭಿವೃದ್ಧಿಯನ್ನು ಮರೆಮಾಚಬೇಕು ಎನ್ನುವುದು ಕಾಂಗ್ರೆಸ್‍ನ ಉದ್ದೇಶ. ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸದ ಕುರಿತು ಕಾಂಗ್ರೆಸ್ ಚರ್ಚೆಗೆ ಬರಲು ತಯಾರಿಲ್ಲ. ಮೆಡಿಕಲ್ ಕಾಲೇಜ್ ತಂದಿರುವ ಬಗ್ಗೆ, ಹೈವೇ ರಸ್ತೆಗಳನ್ನು ಮಾಡಿರುವ ಬಗ್ಗೆ, ಕೆರೆ ತುಂಬಿಸಿರುವ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ನವರಿಗೆ ಯೋಗ್ಯತೆ ಇಲ್ಲ. ಹಾಗಾಗಿ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಮನೆ ಬಾಗಿಲು ಬಿಡೋ ಒಳಗೆ ಸುಳ್ಳು ಊರನ್ನೆಲ್ಲಾ ಸುತ್ತಾಡಿತ್ತು ಅನ್ನೋ ಹಾಗೆ ಕಾಂಗ್ರೆಸ್ನವರು ಸುಳ್ಳನ್ನು ವಿಜ್ರಂಭಿಸುವ ಕೆಲಸ ಮಾಡಿದ್ರು. ಆದ್ರೆ, ಇಂದು ಸತ್ಯಾವಾದ ವಿಚಾರಕ್ಕೆ ನ್ಯಾಯ ಸಿಕ್ಕಿದೆ. ಸಿ ಟಿ ರವಿ ಅವರು ಎಲ್ಲೂ ಕೂಡ ಹೇಳಿಕೆ ಕೊಟ್ಟಿಲ್ಲ, ಇದು ಸುಳ್ಳು ಸುದ್ದಿ. ಪೊಲೀಸ್ನವರು ಕೂಡಲೇ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕಲ್ಮರುಡಪ್ಪ ಒತ್ತಾಯಸಿದರು.
ಇದನ್ನೂ ಓದಿ :ಟಿಪ್ಪು ಇನ್ನೂ ಹೆಚ್ಚು ಕಾಲ ಬದುಕಿದ್ದಿದ್ದರೆ ಹಾಸನವು ಕೈಮಾಬಾದ್ ಆಗಿರುತ್ತಿತ್ತು:ಸಿಟಿ ರವಿ