ಚಿಕ್ಕಮಗಳೂರು:ಕಳೆದ ನಾಲ್ಕೈದು ತಿಂಗಳಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿದ್ದ ಕಾಡಾನೆ ಮೂಡಿಗೆರೆ ಭೈರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೂಡಿಗೆರೆ ತಾಲೂಕಿನಾದ್ಯಂತ ದಾಂಧಲೆ ನಡೆಸಿಕೊಂಡು ಇಬ್ಬರ ಜೀವ ತೆಗೆದಿದ್ದ ಭೈರನಿಂದ ಜನ ರೋಸಿ ಹೋಗಿದ್ದರು. ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದರು. ಆನೆ ಹಾವಳಿಯಿಂದ ತಿಂಗಳಿಗೊಂದು ಹೆಣ ಬಿದ್ದ ಪರಿಣಾಮ ಕಂಗೆಟ್ಟಿದ್ದ ಜನ ಶಾಸಕ ಎಂ ಪಿ ಕುಮಾರಸ್ವಾಮಿ ಮೇಲೂ ಹಲ್ಲೆಗೆ ಮುಂದಾಗಿದ್ದರು. ಜನ ಯಾವಾಗ ಶಾಸಕರ ಮೇಲೆ ಹಲ್ಲೆಗೆ ಮುಂದಾದರೋ ಕೂಡಲೇ ಸರ್ಕಾರ ಮೂರು ಕಾಡಾನೆಗಳನ್ನು ಹಿಡಿಯಲು ಹಸಿರು ನಿಶಾನೆ ತೋರಿತ್ತು.
ಸಾಕಾನೆಗಳೊಂದಿಗೆ ಕಾರ್ಯಾಚರಣೆ.. ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಳೆದ ಎಂಟತ್ತು ದಿನಗಳಿಂದ ಆರು ಸಾಕಾನೆಗಳೊಂದಿಗೆ ಮೂರು ಕಾಡಾನೆಗಳನ್ನು ಹಿಡಿಯಲು ಅಧಿಕಾರಿಗಳು, ಸ್ಥಳೀಯರು ಹಗಲಿರುಳು ಕಷ್ಟ ಪಟ್ಟಿದ್ದರು. ಎರಡು ಕಾಡಾನೆಗಳನ್ನು ಸೆರೆ ಹಿಡಿದು ಮಡಿಕೇರಿಯ ಆನೆ ದುಬಾರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರಕ್ಕೆ ಬಿಟ್ಟಿದ್ದರು. ಆದರೆ ಪುಂಡ ಒಂಟಿ ಸಲಗ ಮೂಡಿಗೆರೆ ಭೈರ ಮಾತ್ರ ಎಲ್ಲರ ಕಣ್ತಪ್ಪಿಸಿ ನಾಪತ್ತೆಯಾಗುತ್ತಿತ್ತು.
ಜನರು ಮತ್ತು ಅಧಿಕಾರಿಗಳು ನಿರಾಳ.. ಅರಣ್ಯ ಅಧಿಕಾರಿಗಳ ಡ್ರೋನ್ ಕ್ಯಾಮರಾ ಕಣ್ತಪ್ಪಿಸಿ ದಟ್ಟ ಕಾನನದಲ್ಲಿ ಪರಾರಿಯಾಗಿ ಓಡಾಡ್ತಿದ್ದ. ಆದರೆ ಭಾನುವಾರ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ಭೈರನನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಈ ಮೂಡಿಗೆರೆ ಭೈರನನ್ನು ಸೆರೆ ಹಿಡಿಯುವಷ್ಟರಲ್ಲಿ ಅರಣ್ಯ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ. ಜನರ ನಿದ್ದೆಗೆಡಿಸಿದ್ದ ಭೈರ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.