ಚಿಕ್ಕಮಗಳೂರು : ಜಮೀನು ವಿಚಾರವಾಗಿ ಎರಡು ಕುಟುಂಬಗಳು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಟ್ಟನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಚಟ್ಟನಪಾಳ್ಯ ಗ್ರಾಮದ ಶಿವಣ್ಣ ಎಂಬುವರ ಹೆಸರಿನಲ್ಲಿ ಮುಕ್ಕಾಲು ಗುಂಟೆ ಅಡಕೆ ತೋಟವಿದೆ. 1960 ನೇ ಇಸವಿಯಿಂದಲೂ ಆ ಜಾಗ ಶಿವಣ್ಣ ಸ್ವಾಧೀನದಲ್ಲಿದೆ. ಆದರೆ, ಪಹಣಿ ಮಾತ್ರ ಶಿವಣ್ಣನ ಸಹೋದರನ ಹೆಸರಿನಲ್ಲಿ ಇತ್ತು. ಸ್ವಾಧೀನಲ್ಲಿದ್ದವರೇ ಅಡಕೆಯನ್ನು ಕೊಯ್ಯುತ್ತಿದ್ದರು. ಈ ಕುರಿತು ಎರಡು ಕುಟುಂಬಗಳ ಮಧ್ಯೆ ಹಲವು ಬಾರಿ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಶಿವಣ್ಣನ ಕುಟುಂಬದವರು ಅಡಕೆ ಕೊಯ್ಯುವಾಗ ತೋಟದಲ್ಲೇ ಎರಡು ಕುಟುಂಬದವರ ನಡುವೆ ಮಾರಾಮಾರಿ ನಡೆದಿದೆ. ಕೈಯಲ್ಲಿ ಕುಡುಗೋಲು, ಲಾಂಗ್ ಹಿಡಿದು ಪುರುಷರು ಮತ್ತು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಶಿವಣ್ಣನ ಸಹೋದರನ ಮಗ ಚರಣ್ ಕೈಯಲ್ಲಿ ಲಾಂಗ್ ಹಿಡಿದು ಖಾರದ ಪುಡಿ ಹಾಕ್ತೀಯಾ?, ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿಯಾ ಎಂದು ಹಲ್ಲೆಗೆ ಯತ್ನಿಸಿದ್ದಾನೆ. ಶಿವಣ್ಣ ಕೂಡ ಕೈಯಲ್ಲಿ ಕುಡುಗೋಲು ಹಿಡಿದು ಗಲಾಟೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬದವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.