ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಬಂದು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಇದೀಗ ಪ್ರತಿನಿತ್ಯ ಸಾವಿರಾರು ಕೇರಳಿಗರು ಜಿಲ್ಲೆಗೆ ಬರುವುದರಿಂದ ಕೊರೊನಾ ರೂಪಾಂತರಿ ವೈರಸ್ ಹರಡುವ ಭೀತಿ ಎದುರಾಗಿದೆ. ಕೇರಳದಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹೋಟೆಲ್, ಲಾಡ್ಜ್, ರೆಸಾರ್ಟ್‍ಗಳಲ್ಲಿ ತಂಗುತ್ತಿದ್ದಾರೆ. ಇದರಿಂದ ಮತ್ತೆ ಕೊರೊನಾ ಹರಡುವ ಸಾಧ್ಯತೆ ಇದ್ದು, ಸರ್ಕಾರ ಕೇರಳದಿಂದ ಆಗಮಿಸುವ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕೆಂದು ಜನರು ಆಗ್ರಹಿಸಿದ್ದಾರೆ.
ಸಾಧಾರಣ ಮಳೆಯಿಂದಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಏಜೆನ್ಸಿಗಳ ಮೂಲಕ ಪ್ಯಾಕೇಜ್ನಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದೇ ಏಜೆನ್ಸಿಗಳ ಮೂಲಕ ಜಿಲ್ಲೆಗೆ ಆಗಮಿಸುವ ಕೇರಳದ ಪ್ರವಾಸಿಗರು ವಾರಗಟ್ಟಲೇ ಜಿಲ್ಲೆಯಲ್ಲೇ ತಂಗುತ್ತಾರೆ. ಬಳಿಕ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳು, ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಪ್ರವಾಸ ತಾಣಗಳಿಗೆ ಭೇಟಿ ನೀಡುತ್ತಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಸ್ಥಳೀಯರಾದ ಕೃಷ್ಣೇಗೌಡ, ಕೇರಳದಲ್ಲಿ ಕೊರೊನಾ ರೂಪಾಂತರಿ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲೂ ಕೊರೊನಾ ರೂಪಾಂತರಿ ವೈರಸ್ ಹರಡುವ ಭೀತಿ ಎದುರಾಗಿದೆ. ಈ ಹಿಂದೆ ಕೊರೊನಾ ಬಂದ ಸಂದರ್ಭದಲ್ಲಿ ನಾವು ಅನುಭವಿಸಿದ ಕಷ್ಟಗಳನ್ನು ಮರೆತಿಲ್ಲ. ಜಿಲ್ಲೆಯಿಂದ ನೂರಾರು ಅಯ್ಯಪ್ಪ ಭಕ್ತರು ಸೇರಿದಂತೆ ಪ್ರವಾಸಿಗರು ಕೇರಳಕ್ಕೆ ತೆರಳುತ್ತಿದ್ದಾರೆ. ಕೇರಳದಿಂದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರಿಂದ ಕೇರಳದಲ್ಲಿ ಕಂಡು ಬಂದಿರುವ ಕೊರೊನಾ ರೂಪಾಂತರಿ ವೈರಸ್ ಇಲ್ಲೂ ಹರಡುವ ಭೀತಿ ಎದುರಾಗಿದೆ. ಈ ಸಂಬಂಧ ಕೇರಳದಿಂದ ಬರುವ ಪ್ರವಾಸಿಗರನ್ನು ಜಿಲ್ಲಾಡಳಿತ ತಡೆಯಬೇಕು. ಜೊತೆಗೆ ಸೂಕ್ತ ತಪಾಸಣೆ ನಡೆಸಬೇಕು. ಜಿಲ್ಲೆಯಿಂದ ಕೇರಳಕ್ಕೆ ತೆರಳುವವರನ್ನು ತಡೆಯಬೇಕು ಎಂದು ಒತ್ತಾಯಿಸಿದರು.