ಚಿಕ್ಕಮಗಳೂರು: ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ರೈತರು ಕಂಗಾಲಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಉಳ್ಳಾಗಡ್ಡಿ ಬೆಲೆ ತೀವ್ರ ಕುಸಿದಿದ್ದು, ಪರಿಣಾಮ ಸಾಲ ಮಾಡಿ ಬೆಳೆದ ಬೆಳೆ ಜಮೀನಿನಲ್ಲೇ ಕೊಳೆಯುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬೆಳೆಯನ್ನ ಬಿತ್ತನೆ ಮಾಡಲಾಗುತ್ತದೆ. ಇದೇ ಬೆಳೆಯನ್ನ ನಂಬಿಕೊಂಡು ಸಾವಿರಾರು ರೈತರು ಬದುಕನ್ನ ಕಟ್ಟಿಕೊಂಡಿದ್ದಾರೆ.
ಆದರೆ, ಯಾವ ಬೆಳೆಯನ್ನ ನಂಬಿಕೊಂಡು ಜೀವನ ಸಾಗಿಸ್ತಿದ್ರೋ ಅದೇ ಬೆಳೆಗೆ ಮಾರುಕಟ್ಟೆಯಲ್ಲಿ ಮೂರು ಕಾಸಿನ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಸಾಲ - ಸೋಲ ಮಾಡಿ ಈರುಳ್ಳಿ ಬೆಲೆಯನ್ನ ಬೆಳೆದಿದ್ದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಳ್ಳಾಗಡ್ಡಿ ಬೆಲೆ ತೀವ್ರ ಕುಸಿತಕ್ಕೆ ರೈತರಲ್ಲಿ ಮನೆಮಾಡಿದ ಆತಂಕ ಅಜ್ಜಂಪುರ ತಾಲೂಕಿನಾದ್ಯಂತ 11 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು, ಕಟಾವಿಗೆ ಬಂದಿದೆ. ಆದರೆ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಪರಿಣಾಮ ತಾಲೂಕಿನ ಹಲವೆಡೆ ಈರುಳ್ಳಿ ಬೆಳೆ ಕಟಾವು ಮಾಡದೇ ರೈತರು ಹಾಗೆಯೇ ಬಿಟ್ಟಿದ್ದಾರೆ.
ಇನ್ನಾದರೂ ನಮಗೊಂದು ಕೋಲ್ಡ್ ಸ್ಟೋರೇಜ್ ಘಟಕ ಮಾಡಿ ಕೊಡಿ ಎಂದು ಸಂಸದರು, ಶಾಸಕರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.