ಕರ್ನಾಟಕ

karnataka

ETV Bharat / state

ಮುಗಿಯದ ಪ್ರಾಣಿ - ಮಾನವ ಸಂಘರ್ಷ: ಮಲೆನಾಡಿಗರಿಗೆ ಕಾಡಾನೆ ಜೊತೆ ಹುಲಿ ಕಾಟ - Farmers losing their livestock

ದಿನೇ ದಿನೇ ಹೊಸರೂಪ ಪಡೆಯುತ್ತಿರುವ ಪ್ರಾಣಿ ಮತ್ತು ಮಾನವ ಸಂಘರ್ಷ - ಹುಲಿ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿರುವ ರೈತಾಪಿ ವರ್ಗ - ಹುಲಿ ಸೆರೆ ಕಾರ್ಯಾಚರಣೆಗೆ ಮುಂದಾಗದ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ.

ಹುಲಿ ದಾಳಿ
tiger

By

Published : Feb 17, 2023, 7:01 AM IST

ಚಿಕ್ಕಮಗಳೂರು: ಕಾಡಾನೆ ಹಾವಳಿಯಿಂದ ಬೇಸತ್ತಿದ್ದ ರೈತರು ಇದೀಗ ಹುಲಿ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ತಮ್ಮ ಜೀವನಕ್ಕೆ ಆಸರೆಯಾಗಿರುವ ದನಕರುಗಳನ್ನು ಕಳೆದುಕೊಂಡು ಸಂದಿಗ್ಧ ಪರಿಸ್ಥಿತಿ ಎದುರಿಸುವ ಭೀತಿಯಲ್ಲಿದ್ದಾರೆ.

ಹೌದು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಳೆದ 6 ತಿಂಗಳಿಂದ ಹುಲಿ ದಾಳಿ ಮುಂದುವರೆದಿದೆ. ಇದೀಗ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ. ಹೀಗಾಗಿ, ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ಜಾನುವಾರುಗಳನ್ನು ಸಾಕಿಕೊಂಡು ಬದುಕು ಸಾಗಿಸುತ್ತಿದ್ದ ರೈತ ಕುಟುಂಬ ಭವಿಷ್ಯದ ಬಗ್ಗೆ ಆಲೋಚಿಸುವಂತಾಗಿದೆ.

50 ಕ್ಕೂ ಅಧಿಕ ಜಾನುವಾರುಗಳು ಸಾವು: ಬೆಳಗ್ಗೆ ಮನೆಯಿಂದ ಗುಡ್ಡಕ್ಕೆ ಮೇಯಲು ಹೋದ ಹಸುಗಳು ವಾಪಸ್ ಬರುವವರೆಗೂ ಅನ್ನದಾತರು ಭಯದಲ್ಲೇ ಟೈಮ್​ ಕಳೆಯುವಂತಹ ಸ್ಥಿತಿ ಉಂಟಾಗಿದೆ. ಈಗಾಗಲೇ ಆನೆಗಳು, ಕಾಡುಕೋಣ ಸೇರಿದಂತೆ ಇತರೆ ಪ್ರಾಣಿಗಳ ದಾಳಿಯಿಂದ ಹೈರಾಣಾದ ಜನರು, ಕಳೆದ 6 ತಿಂಗಳಿಂದ ಹುಲಿ ದಾಳಿ ಆತಂಕದಲ್ಲಿದ್ದಾರೆ. ಈವರೆಗೂ ಹುಲಿ ದಾಳಿಗೆ 50 ಕ್ಕೂ ಹೆಚ್ಚು ದನಕರುಗಳು ಬಲಿಯಾಗಿವೆ. ಹಲವು ಬಾರಿ ಹುಲಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಸಿ ಕ್ಯಾಮರಾ ಹಾಕಿದ್ದರೂ ಹುಲಿ ಸ್ಥಳಾಂತರಿಸಿಲ್ಲವೆಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಅಸಮಧಾನ ಹೊರ ಹಾಕಿದ್ದಾರೆ. ಹುಲಿ ದಾಳಿಯಿಂದ ನಿರಂತರವಾಗಿ ರಾಸುಗಳನ್ನ ಕಳೆದುಕೊಳ್ಳುತ್ತಿರುವ ರೈತರು, ತಕ್ಷಣ ಹುಲಿ ಸೆರೆಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಂಜನಗೂಡು: ಜಾನುವಾರು ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ

ಹುಲಿ ದಾಳಿಗೆ ಹಸು ಬಲಿ: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ ಕಳೆದ 2 ದಿನಗಳ ಹಿಂದೆ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ಮತ್ತಿಕಟ್ಟೆಯ ಬ್ಲೂ ಮೌಂಟ್ ಎಸ್ಟೇಟ್ ಆನಂದ್ ಮಿಸ್ಕಿತ್ ಎಂಬುವರ ಕಾಫಿ ತೋಟದಲ್ಲಿ ಮಧುಸೂದನ್ ಎನ್ನುವವರ ಹಸು ಹುಲಿ ಬಾಯಿಗೆ ತುತ್ತಾಗಿದೆ. ಬಣಕಲ್ ಸುತ್ತಮುತ್ತಲಿನ ಮತ್ತಿಕಟ್ಟೆ, ಹೆಗ್ಗುಡ್ಲು ಬಿ.ಹೊಸಳ್ಳಿ, ಹೊಕ್ಕಳ್ಳಿ, ಭಾರತೀಬೈಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿವೆ. ಆದರೆ, ಅರಣ್ಯ ಇಲಾಖೆ ಮಾತ್ರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹುಲಿ ದಾಳಿಯಿಂದ ರಾಸುಗಳು ಸಾವನ್ನಪ್ಪುತ್ತಿರುವುದು ಒಂದೆಡೆಯಾದ್ರೆ, ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ತೋಟದ ಕೆಲಸಗಳು ಕುಂಟಿತಗೊಂಡಿವೆ. ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಘ್ರವೇ ಹುಲಿಯನ್ನು ಸೆರೆಹಿಡಿಯುವ ಕೆಲಸವಾಗಬೇಕು ಎಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಾಡುಪ್ರಾಣಿಗಳ ಹಾವಳಿ: ಕೊಡಗಿನಲ್ಲಿ ಕಾಫಿ ಕಟಾವಿಗೆ ಕಾರ್ಮಿಕರ ಹಿಂದೇಟು

ಅಷ್ಟೇ ಅಲ್ಲದೇ, ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ದಾಂಧಲೆ ಸಹ ಆರಂಭವಾಗಿದ್ದು, ಆರಕ್ಕೂ ಹೆಚ್ಚು ಆನೆಗಳು ರಂಪಾಟ ನಡೆಸುತ್ತಿವೆ. ಮೂಡಿಗೆರೆ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಆರಕ್ಕೂ ಅಧಿಕ ಕಾಡಾನೆ ಹಿಂಡು ಲಗ್ಗೆ ಇಟ್ಟಿದೆ. ಸಲಗಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದು, ಗುಂಡು ಹಾರಿಸಿ, ಪಟಾಕಿ ಸಿಡಿಸುವ ಮೂಲಕ ಓಡಿಸಲು ಯತ್ನ ನಡೆಸಿದ್ದಾರೆ.

ABOUT THE AUTHOR

...view details