ಚಿಕ್ಕಮಗಳೂರು:ನೀರಿಗಾಗಿ ಹೋರಾಟ ನಡೆಸಿದ ಇಲ್ಲಿನ ಜನತೆ ಏತ ನೀರಾವರಿ ಯೋಜನೆ ಜಾರಿಯಾಗುವಂತೆ ಮಾಡಿದರು. ಆದರೆ ಯೋಜನಾ ಕಾಮಗಾರಿ ಶುರುವಾಗಿ 3 ದಶಕಗಳೇ ಕಳೆದರೂ ನೀರು ಮಾತ್ರ ಸಿಕ್ಕಿಲ್ಲ. ನೀರು ಬರುವ ಖುಷಿಯಲ್ಲಿ ಜಮೀನು ನೀಡಿದವರಿಗೆ, ಇತ್ತ ನೀರೂ ಇಲ್ಲ ಅತ್ತ ಪರಿಹಾರವೂ ಇಲ್ಲ ಎಂಬಂತಾಗಿದೆ. ಕಳೆದ 18 ವರ್ಷಗಳಿಂದ ಈ ಯೋಜನೆ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ...
ಓದಿ: ಆಳ ಸಮುದ್ರದಲ್ಲಿ ಮುಳುಗಿದ ಬೋಟ್: 15 ಮೀನುಗಾರರ ರಕ್ಷಣೆ
ಚಿಕ್ಕಮಗಳೂರು ತಾಲೂಕಿನ ಪ್ರಮುಖ ಯೋಜನೆಗಳಲ್ಲಿ ಒಂದು ಮಳಲೂರು ಏತ ನೀರಾವರಿ ಯೋಜನೆ. 1998 ರಲ್ಲಿ ಆರಂಭವಾದ ಈ ಯೋಜನೆ ಮಳಲೂರು ಸುತ್ತಮುತ್ತಲಿನ ಸುಮಾರು 1200 ಎಕರೆ ಪ್ರದೇಶಕ್ಕೆ ನೀರೊದಗಿಸುವ ಗುರಿ ಹೊಂದಿದೆ. ಆದರೆ ಏತ ನೀರಾವರಿ ಯೋಜನೆ ಪೂರ್ಣಗೊಳ್ಳುವ ಅದೃಷ್ಟ ಮಾತ್ರ ಇನ್ನೂ ಕೂಡಿ ಬಂದಿಲ್ಲ.
ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್ಗಳ ಅಳವಡಿಕೆ ಮುಕ್ತಾಯವಾಗಿದೆ. 2ನೇ ಹಂತದ ಪಂಪ್ ಅಳವಡಿಕೆ, ವಿದ್ಯುತ್ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.
ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಜಮೀನುಗಳನ್ನು ನೀಡಿದ್ದಾರೆ. ಯೋಜನೆ ಪೂರ್ಣಗೊಳಿಸುವಂತೆ ಹಲವು ವರ್ಷಗಳಿಂದ ಜನ ಒತ್ತಡ ಹೇರಿ ಧರಣಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಗಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಲಕರಣೆಗಳನ್ನು ಹಾಕಲಾಗಿದೆ. ಆದರೆ ಹಾಕಿರುವ ಪೈಪ್ಗಳು ಹಾಳಾಗಿ ಹೋಗುತ್ತಿದ್ದು, ನೀರಿಗಾಗಿ ರೈತರ ಕಾಯುವಿಕೆ ಮುಗಿಯುತ್ತಿಲ್ಲ.
ಸಾವಿರಾರು ಎಕರೆ ಜಮೀನನ್ನು ಹಸಿರಾಗಿಸುವ ಏತ ನೀರಾವರಿ ಯೋಜನೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ನೆನೆಗುದಿಗೆ ಬಿದ್ದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಭಾಗದ ರೈತರಿಗೆ ಅನ್ನ ನೀಡಿ ಆದಾಯ ಹೆಚ್ಚಿಸುವ ಈ ಯೋಜನೆಗೆ ಇನ್ನು ಎಷ್ಟು ದಿನ ಕಾಯಬೇಕು ಎಂದು ಇಲ್ಲಿನ ರೈತರು ಕೇಳುತ್ತಿದ್ದಾರೆ.
ಸರ್ಕಾರ ಕೂಡಲೇ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮುಗಿಸಬೇಕು ಹಾಗೂ ಕೂಡಲೇ ರೈತರ ಜಮೀನುಗಳಿಗೆ ನೀರು ಸಿಗುವಂತೆ ಸರ್ಕಾರ ಈಗಲಾದರೂ ಕ್ರಮ ಕೈಗೊಳ್ಳಬೇಕೆಂಬುದು ಮಳಲೂರು ಗ್ರಾಮದ ಸುತ್ತ ಮುತ್ತಲಿನ ಜನರ ಒತ್ತಾಯವಾಗಿದೆ.