ಚಿಕ್ಕಮಗಳೂರು:ಕಾಡುಕೋಣ ದಾಳಿಯಿಂದ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳಸ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಮುಜೇಕಾನ್ ಗ್ರಾಮದ ಮರಿಗೌಡ ಕಾಡುಕೋಣದಿಂದ ದಾಳಿಗೊಳಗಾದ ರೈತ. ಶನಿವಾರ ಮುಜೇಕಾನ್ ನಿಂದ ಕಳಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕಾಡುಕೋಣ ದಾಳಿ ನಡೆಸಿದೆ. ಕಾಡುಕೋಣದಿಂದ ತಪ್ಪಿಸಿಕೊಳ್ಳಲು ಅವರು ನೆಲದ ಮೇಲೆ ಮಲಗಿದ್ದಾರೆ. ಆದರೂ ಬಿಡದ ಕಾಡುಕೋಣ ಮರಿಗೌಡ ಅವರ ಎದೆಗೆ ಕೊಂಬಿನಿಂದ ಇರಿದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮರಿಗೌಡರನ್ನು ಸ್ಥಳೀಯರು ಕಳಸ ಆಸ್ಪತ್ರಗೆ ದಾಖಲಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಮರಿಗೌಡರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಮರೀಗೌಡರ ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ. ಗಾಯದ ತೀವ್ರತೆಗೆ ಹೃದಯದ ಭಾಗಕ್ಕೂ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಕೆಲ ತಿಂಗಳ ಹಿಂದೆ ಕಳಸ ತಾಲೂಕಿನ ತೋಟದೂರು ಗ್ರಾಮದಲ್ಲಿ ರೈತರೊಬ್ಬರು ಕಾಡುಕೋಣ ದಾಳಿಯಿಂದ ಮೃತಪಟ್ಟಿದ್ದರು. ಈ ಭಾಗದಲ್ಲಿ ಕಾಡು ಕೋಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹಗಲು ರಾತ್ರಿಯೆನ್ನದೇ ರಾಜಾ ರೋಷವಾಗಿ ಕಾಡು ಕೋಣಗಳು ಹಿಂಡು ಹಿಂಡಾಗಿ ತಿರುಗುತ್ತಿವೆ. ಇದರಿಂದ ಬೆಳೆಹಾನಿ ಜೊತೆಗೆ ಜೀವಭಯದಿಂದ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಹುಡುಕಿ ಎಂದು ಸ್ಥಳೀಯರು ಹಾಗೂ ರೈತರು ಆಗ್ರಹಿಸಿದ್ದಾರೆ.
ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬಸ್ಥರ ಮನೆಗಳಿಗೆ ಸಚಿವ ಈಶ್ವರ್ ಖಂಡ್ರೆ ಭೇಟಿ: ಮತ್ತೊಂದೆಡೆ, ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬಸ್ಥರ ಮನೆಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇಂದು ಸಚಿವ ಈಶ್ವರ್ ಖಂಡ್ರೆ ನಾಣಚ್ಚಿ ಹಾಡಿ, ಅರೆಕಾಡು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಡಾನೆ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.