ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಭೈರನನ್ನು ಹರಸಾಹಸ ಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಇದಾದ ಕೆಲ ದಿನಗಳಲ್ಲೇ ಮತ್ತೊಂದು ಕಾಡಾನೆ ಜನರ ಕಣ್ಣಿಗೆ ಬಿದ್ದಿತ್ತು. ಆಗ ಇದೇ ಭೈರ. ಅರಣ್ಯ ಇಲಾಖೆ ಹಿಡಿದಿರುವುದು ಪುಂಡಾನೆ ಭೈರ ಅಲ್ಲ ಎಂಬ ಶಂಕೆಯನ್ನು ಜನರು ವ್ಯಕ್ತಪಡಿಸಿದ್ದರು.
ಹೌದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ರೈತರು ಹೈರಾಣಾಗಿದ್ದು, ಸಾವು ನೋವುಗಳ ಸಂಖ್ಯೆ ಏರುತ್ತಲೇ ಇದೆ. ಕಾಡು ಪ್ರಾಣಿಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿಗಳು ಸಂಭವಿಸುತ್ತಿವೆ. ಇದೆಲ್ಲದರ ನಡುವೆ ಶನಿವಾರ ಬೆಳೆ ಕಾಯಲು ಹೋಗಿದ್ದ ರೈತರೋರ್ವರು ಆನೆ ತುಳಿತದಿಂದ ಮೃತಪಟ್ಟಿದ್ದಾರೆ.
ಈ ಮೂಲಕ ಕಾಡಾನೆ ಕಾಫಿನಾಡಿನಲ್ಲಿ ಮತ್ತೊಂದು ರೈತನನ್ನು ಬಲಿ ಪಡೆದಿದೆ. ಜಮೀನಿನಲ್ಲಿ ರಾಗಿ ಫಸಲು ಕಾಯುತ್ತ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಆನೆ ಏಕಾಏಕಿ ದಾಳಿ ಮಾಡಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ
ಗುಡಿಸಲು ಮೇಲೆ ಆನೆ ದಾಳಿ:ಈರಪ್ಪ (60) ಕಾಡಾನೆ ದಾಳಿಯಿಂದ ಮೃತಪಟ್ಟಿರುವ ರೈತರಾಗಿದ್ದಾರೆ. ಈರಪ್ಪ ತಮ್ಮ ಹೊಲದಲ್ಲಿ ರಾಗಿ ಬೆಳೆದಿದ್ದರು. ಹಾಗಾಗಿ ಅವರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸುವ ಸಲುವಾಗಿ ಕಾವಲು ಕಾಯಲು ಹೋಗಿದ್ದರು. ರಾತ್ರಿ ಇಡೀ ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಮಲಗುತ್ತಿದ್ದರು. ಈ ವೇಳೆ ಗುಡಿಸಲಿನ ಮೇಲೆ ದಿಢೀರ್ ದಾಳಿ ನಡೆಸಿದ ಕಾಡಾನೆ ಗುಡಿಸಲು ಧ್ವಂಸ ಮಾಡಿ, ರೈತ ಈರಪ್ಪನನ್ನು ಅಡಿಕೆ ಗಿಡಗಳನ್ನು ಬೆಳೆದಿದ್ದ ಹೊಲಕ್ಕೆ ಎಳೆ ತಂದು ತುಳಿದು ಸಾಯಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ: ಕಾಡಾನೆ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಯಲ್ಲಿ ಈ ಬಾರಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕೊಂದರಲ್ಲೇ ಕಾಡಾನೆ ದಾಳಿಗೆ 6 ಮಂದಿ ಬಲಿಯಾಗಿದ್ದಾರೆ.