ಕರ್ನಾಟಕ

karnataka

ETV Bharat / state

ಕಾಫಿ ತೋಟದಲ್ಲಿ ಬೀಡು ಬಿಟ್ಟ ಕಾಡಾನೆ ಹಿಂಡು: ಅಪಾರ ಪ್ರಮಾಣದ ಬೆಳೆ ನಾಶ - chikkamagaluru elephants attack

ಚಿಕ್ಕಮಗಳೂರು ಜಿಲ್ಲೆಯ ಹಳೆ ಮೂಡಿಗೆರೆಯ ಹಳಸೆ ಕೃಷ್ಣೇಗೌಡರ ಕಾಫಿ ತೋಟದಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು, ಕಾಡಾನೆಗಳ ಅಬ್ಬರಕ್ಕೆ ಕಾಫಿ, ಮೆಣಸು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳು ಸರ್ವನಾಶವಾಗಿವೆ.

chikkamagaluru
ಕಾಡಾನೆಗಳು

By

Published : Oct 18, 2020, 5:25 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದರ್ಬಾರ್ ಜೋರಾಗಿದೆ. ಈ ರೀತಿ ಕಾಡಾನೆಗಳ ಅಬ್ಬರಕ್ಕೆ ಕಾಫಿ ತೋಟಗಳು ಸರ್ವ ನಾಶವಾಗುತ್ತಿದ್ದು, ಒಂದಲ್ಲ-ಎರಡಲ್ಲ 23 ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟದಲ್ಲೇ ಮೊಕ್ಕಾಂ ಹೂಡಿವೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

ಚಿಕ್ಕಮಗಳೂರು ಜಿಲ್ಲೆಯ ಹಳೆ ಮೂಡಿಗೆರೆಯ ಹಳಸೆ ಕೃಷ್ಣೇಗೌಡರ ಕಾಫಿ ತೋಟದಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಬರೋಬ್ಬರಿ 23 ಕಾಡಾನೆಯ ವಂಶವೇ ಇದೆ. ಹಿಂಡಿಂಡು ಕಾಡಾನೆಗಳನ್ನು ಕಾಡಿಗೋಡಿಸಲು ಅರಣ್ಯ ಸಿಬ್ಬಂದಿ ಹೋರಾಡ್ತಿದ್ದಾರೆ. ಎಸಿಎಫ್, ಆರ್​ಎಫ್​ಓ ಸೇರಿದಂತೆ 30 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾಡಾನೆಗಳ ಚಲನ-ವಲನ ಗಮನಿಸಿ ಕಾಡಿಗಟ್ಟಲು ಯತ್ನಿಸುತ್ತಿದ್ದಾರೆ. ಕಾಡಾನೆಗಳ ಅಬ್ಬರಕ್ಕೆ ಕಾಫಿ, ಮೆಣಸು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳು ಸರ್ವನಾಶವಾಗಿವೆ.

ಹಳೆ ಮೂಡಿಗೆರೆಯ ಹಳಸೆ ಕೃಷ್ಣೇಗೌಡರ ಕಾಫಿ ತೋಟದಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯೆಸಲೂರು ಭಾಗದಿಂದ ಬಂದ ಈ ಹಿಂಡು-ಹಿಂಡು ಕಾಡಾನೆಗಳು ಮೂಡಿಗೆರೆ ಕಡೆ ಮುಖ ಮಾಡಿವೆ. ಹೀಗೆ ಬರುವ ಮಾರ್ಗ ಮಧ್ಯೆ ಮೂಡಿಗೆರೆ ತಾಲೂಕಿನ ಕೆಲ್ಲೂರು, ದುಂಡುಗ, ಹಳಸೆ, ಕುನ್ನಹಳ್ಳಿ, ಕೃಷ್ಣಾಪುರ ಸೇರಿದಂತೆ ಹತ್ತಾರು ಗ್ರಾಮಗಳ ಕಾಫಿ ತೋಟಗಳಲ್ಲಿ ಅಟ್ಟಹಾಸ ಸೃಷ್ಟಿಸಿರೋ ಗ್ಯಾಂಗ್ ನೋಡಿ ಬೆಳೆಗಾರರು, ರೈತರು ಆತಂಕಗೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಗುತ್ತಿ, ಮೂಲರಹಳ್ಳಿ, ಬೈರಾಪುರ, ಗೌಡಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲೂ ಕಾಡಾನೆ ಆರ್ಭಟವಿದ್ರೂ ಇಷ್ಟೊಂದು ಪ್ರಮಾಣದ ಗುಂಪು ಗುಂಪು ಕಾಡಾನೆಗಳನ್ನು ಜನರು ನೋಡಿರಲಿಲ್ಲ. ಸದ್ಯ ಈ ಕಿಲಾಡಿ ಗ್ಯಾಂಗನ್ನು ನೋಡಿ ಈ ಭಾಗದ ಜನರು ಬೆಚ್ಚಿಬಿದ್ದಿದ್ದಾರೆ.

ಒಟ್ಟಾರೆಯಾಗಿ ನಾಲ್ಕು ದಿನಗಳ ಹಿಂದೆ ಕಾಫಿನಾಡಿಗೆ ಈ ಕಾಡಾನೆಗಳು ಎಂಟ್ರಿ ಕೊಟ್ಟಿದ್ದು, ಅಲ್ಲಲ್ಲಿ ಆರ್ಭಟಿಸುತ್ತಲೇ ಇವೆ. ಸದ್ಯ ಹಳೆ ಮೂಡಿಗೆರೆ ತೋಟದಲ್ಲಿ ಮೊಕ್ಕಾಂ ಹೂಡಿರೋ ಕಾಡಾನೆಗಳು, ಆ ತೋಟದಲ್ಲಿ ಉಂಟು ಮಾಡಿರೋ ನಷ್ಟ ಅಷ್ಟಿಷ್ಟಲ್ಲ. ಕೂಡಲೇ ಈ ಕಾಡಾನೆಗಳನ್ನು ಅರಣ್ಯಕ್ಕೆ ಸ್ಥಳಾಂತರ ಮಾಡಿ ಎಂಬ ಕೂಗು ಕೇಳಿ ಬರುತ್ತಿದ್ದರೆ, ಈ ಕಾಡಾನೆಗಳನ್ನು ಅರಣ್ಯಕ್ಕೆ ಕಳುಹಿಸಲು ಸಿಬ್ಬಂದಿಗಳು ಕೂಡ ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

...view details