ಚಿಕ್ಕಮಗಳೂರು:ರಾಜ್ಯದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಬಂದು ಹೋಗಲಷ್ಟೇ ಸ್ವರ್ಗವೆನಿಸುತ್ತದೆ. ಆದರೆ, ಇಲ್ಲಿ ನೆಲೆಗೊಂಡು ಜೀವನ ಮಾಡುವವರಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗತೊಡಗಿದೆ. ಮೂಡಿಗೆರೆಯ ಒಂದೇ ಕಾಫಿ ಎಸ್ಟೇಟ್‌ನಲ್ಲಿ 16 ಕಾಡಾನೆಗಳು ಒಂದು ವಾರದಿಂದ ಬೀಡು ಬಿಟ್ಟಿದ್ದು, ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನ ಆನೆ ಓಡಿಸುವ ಪ್ರಯತ್ನ ಸಂಪೂರ್ಣ ವ್ಯರ್ಥವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಾಡಾನೆಗಳು ಪದೇ ಪದೆ ದಾಳಿ ನಡೆಸುತ್ತಿದ್ದು, ಇಲ್ಲಿನ ರೈತರು, ಜನರು ಆತಂಕದಿಂದ ಜೀವನ ಸಾಗಿಸುವಂತಾಗಿದೆ. ಇದೀಗ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ಕಾಫಿ, ಅಡಿಕೆ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಇದರಿಂದ ರೈತರು ಆತಂಕದಿಂದ ಬದುಕುವಂತಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಜಿ. ಹೊಸಳ್ಳಿ ಗ್ರಾಮದಲ್ಲಿರುವ ಟಾಟಾ ಎಸ್ಟೇಟ್‌ನಲ್ಲಿ ಆನೆಗಳು ಬೀಡು ಬಿಟ್ಟಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 16 ಕಾಡಾನೆಗಳು ಎಸ್ಟೇಟ್ನ ತೋಟದಲ್ಲಿ ಸಾಲಾಗಿ ಸಾಗುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಕಳೆದ ಅನೇಕ ದಿನಗಳಿಂದ ಜಿ. ಹೊಸಳ್ಳಿ, ಅರೇಹಳ್ಳಿ, ಚೀಕನಹಳ್ಳಿ, ಮಾಕೋನಹಳ್ಳಿ, ಮಲಸಾವರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಕಾಡಾನೆಗಳು ಸುತ್ತು ಹೊಡೆಯುತ್ತಿವೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ ಆನೆ ದಾಳಿಗೆ ಮಹಿಳೆ ಬಲಿ: ಗ್ರಾಮಸ್ಥರ ಆಕ್ರೋಶ