ಚಿಕ್ಕಮಗಳೂರು: ಕಳೆದ ಎರಡ್ಮೂರು ತಿಂಗಳಿಂದ ತಾಲೂಕಿನ ಬೀಕನಹಳ್ಳಿ-ಹಂಪಾಪುರ, ಕೆಂಪನಹಳ್ಳಿ, ಚಂದ್ರಕಟ್ಟೆ, ಐನಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ರೋದನೆ ಕೊಟ್ಟಿದ್ದ ಪುಂಡಾನೆಯನ್ನು ಸ್ಥಳೀಯರು-ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದಾರೆ. ಕಾರ್ಯಾಚರಣೆಗೆ ಅಧಿಕಾರಿಗಳು ನಾಗರಹೊಳೆಯಿಂದ ಮೈಸೂರು ಅಂಬಾರಿ ಹೊರುವ ಭೀಮಾ-ಅರ್ಜುನ ಆನೆಯನ್ನು ಕರೆಸಿದ್ದರು. ಇದರಿಂದ ಯಾವುದೇ ಪ್ರಯೋಜನವಾಗದಿದ್ದಾಗ ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಪಾಲು, ಭಾನುಮತಿಯೆಂಬ ಮತ್ತೆ ಮೂರು ಆನೆ ಕರೆಸಿ ಈ ಪುಂಡನಿಗೊಂದು ಗತಿ ಕಾಣಿಸಿದ್ದಾರೆ.
ಪುಂಡಾನೆಯನ್ನು ಮಟ್ಟ ಹಾಕಲು ಮೊದಲು ಅಖಾಡಕ್ಕಿಳಿದಿದ್ದ ಅಂಬಾರಿ ಸ್ಪೆಷಲಿಸ್ಟ್ ಭೀಮಾ-ಅರ್ಜುನರಿಗೂ ಆಗ್ಲಿಲ್ಲ. ಶತಾಯಗತಾಯ ಹೋರಾಡಿದ್ರು ಕಾಡಾನೆ ಎದುರು ಸಾಕಾನೆಗಳ ಆಟ ನಡೆಯಲಿಲ್ಲ. ಕಾಡಿನಾದ್ಯಂತ ಹುಡುಕಾಟ ನಡೆಸ್ತಿದ್ದ ದಸರಾ ಆನೆಗಳಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಒಂಟಿ ಸಲಗ ರಾತ್ರಿ ಬಂದು ಈ ದಸರಾ ಆನೆಗಳ ಜೊತೆಯೇ ಊಟ ಮಾಡಿಕೊಂಡು ಮಲಗಿ ಫ್ರೆಂಡ್ ಶಿಪ್ ಮಾಡ್ಕೊಂಡ್ ಹೋಗಿತ್ತು.