ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿ, ಮೇಗೂರು, ಮಲೆಮನೆ, ಜಾವಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿವೆ.
ಕಾಡಾನೆ ದಾಳಿಯಿಂದ ಬೆಳೆ ನಷ್ಟ ಪ್ರತಿದಿನ ರಾತ್ರಿ ವೇಳೆ ಕಾಫಿತೋಟಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳು, ತೋಟದಲ್ಲಿ ಅಡಿಕೆ, ಏಲಕ್ಕಿ, ಬಾಳೆ ಸೇರಿದಂತೆ ಎಲ್ಲಾ ಬೆಳೆಗಳನ್ನು ತಿಂದು ಉಳಿದ ಬೆಳೆಗಳನ್ನು ತುಳಿದು ನಾಶ ಮಾಡುತ್ತಿವೆ. ಇತ್ತೀಚಿಗೆ ಪ್ರತಿ ನಿತ್ಯವೂ ಇವುಗಳ ದಾಳಿ ಮುಂದುವರೆದಿರುವುದರಿಂದ ರೈತರು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ.
ಕಳೆದ ಬಾರಿಯ ಪ್ರವಾಹದಲ್ಲಿ ಇಡೀ ಊರಿನ ಜನರೇ ಹೊರಗಡೆ ಬರಲಾರದೆ ಸಂಕಷ್ಟದಲ್ಲಿ ಸಿಲುಕಿದ್ದರು. ಕೊನೆಗೆ ಅಲೇಖಾನ್ ಹೊರಟ್ಟಿ ಗ್ರಾಮದ ಸಂತ್ರಸ್ಥರನ್ನು ರಕ್ಷಿಸಲು ಭಾರತೀಯ ಸೇನೆಯೇ ಬರಬೇಕಾಯಿತು. ಕಳೆದ ವರ್ಷವೂ ಮಹಾಮಳೆಗೆ ಕಾಫಿ ತೋಟ ಸೇರಿದಂತೆ ಗದ್ದೆಗಳು ಮುಳುಗಡೆಯಾಗಿದ್ದವು. ಆಗ ಇಡೀ ಊರನ್ನೇ ಸ್ಥಳಾಂತರ ಮಾಡುವ ಭರವಸೆಯನ್ನ ಜಿಲ್ಲಾಡಳಿತ, ಜನಪ್ರತಿನಿಧಿಗಳು ನೀಡಿದ್ದರು. ಆದರೆ, ಕೊಟ್ಟ ಮಾತನ್ನು ಮರೆತಿರುವ ಅಧಿಕಾರಿ ವರ್ಗ ಅಲೇಖಾನ್ ಹೊರಟ್ಟಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳನ್ನ ಕಗ್ಗತ್ತಲಲ್ಲಿ ಕೂರುವಂತೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಒಟ್ಟಾರೆಯಾಗಿ ಕಾಡಾನೆಗಳು ಕೂಡ ನಮ್ಮಂತೆ ಪ್ರಾಣಿಗಳು, ಒಂದು ಅವುಗಳನ್ನ ಸ್ಥಳಾಂತರ ಮಾಡಿ, ಇಲ್ಲದಿದ್ದರೆ ನಮ್ಮನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಎಂಬ ಕೂಗು ರೈತಾಪಿ ವಲಯದಿಂದ ಕೇಳಿ ಬರುತ್ತಿದೆ. ಅಲ್ಲದೇ, ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಬಗ್ಗೆ ಗಮನವೇ ಹರಿಸುತ್ತಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.