ಚಿಕ್ಕಮಗಳೂರು: ಕಾಫಿನಾಡಾದ ಚಿಕ್ಕಮಗಳೂರಿನಲ್ಲಿ ಮಾನವ ಪ್ರಾಣಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ರಸ್ತೆ ಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ದಂಪತಿ ಪಾರಾಗಿದ್ದಾರೆ. ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ನಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆಂದು ಹಾಸನ ಜಿಲ್ಲೆಯ ಹಗರೆಯಿಂದ ಮೂಡಿಗೆರೆಗೆ ಈ ದಂಪತಿ ಬಂದಿದ್ದರು. ಭಾನುವಾರ ರಾತ್ರಿ ಬಣಕಲ್ನ ಪಶು ಆಸ್ಪತ್ರೆ ಬಳಿ ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೂಡಿಗೆರೆ ತಾಲ್ಲೂಕು ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಗಳಿಗೆ ಬಂದು ಜೀವ ಭಯ ಸೃಷ್ಟಿಸುತ್ತಿರುವ ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹಿಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹರಸಾಹಸ ಪಟ್ಟು ಭೈರನ ಸೆರೆ:ಈ ಹಿಂದೆ ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಬೈರನನ್ನು ಬಂಧಿಸಲಾಗಿತ್ತು. ಕಾಡಾನೆ ಭೈರನ ದಾಳಿಗೆ ಮೂಡಿಗೆರೆ ತಾಲೂಕಲ್ಲಿ ಇಬ್ಬರು ಬಲಿ ಆಗಿದ್ದರು. ಇದರಿಂದ ಉದ್ರಿಕ್ತರಾಗಿದ್ದ ಜನರು ಅಂದು ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಂ ಪಿ ಕುಮಾರಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.