ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು : ಮೂಲ ಸೌಕರ್ಯಕ್ಕೆ ಒತ್ತಾಯಿಸಿ ನಿರಾಶ್ರಿತರಿಂದ ಚುನಾವಣೆ ಬಹಿಷ್ಕಾರ

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರ - ಮೂಲ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರ ಒತ್ತಾಯ - ಜಿಲ್ಲಾಡಳಿತದಿಂದ ನಿರಾಶ್ರಿತರ ನಿರ್ಲಕ್ಷ್ಯ ಆರೋಪ

Etv election-boycott-at-chikkamagalur-for-basic-infrastructure
Etv ಚಿಕ್ಕಮಗಳೂರು : ಮೂಲ ಸೌಕರ್ಯಕ್ಕೆ ಒತ್ತಾಯಿಸಿ ನಿರಾಶ್ರಿತರಿಂದ ಚುನಾವಣೆ ಬಹಿಷ್ಕಾರ

By

Published : Feb 1, 2023, 11:58 AM IST

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ಜನ ತೀರ್ಮಾನಿಸಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ ಹೊಸಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸುಣ್ಣದಗೂಡಿನಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಮೂಲಭೂತ ಸೌಕರ್ಯ ಕಲ್ಪಿಸದೇ ಇರುವುದರಿಂದ ಮತದಾನ ಬಹಿಷ್ಕರಿಸಲು ನೆರೆ ಸಂತ್ರಸ್ತರು ನಿರ್ಧರಿಸಿದ್ದಾರೆ.

ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ :ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಅತಿ ವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಾದ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿದಿರುತಳ, ಮಧುಗುಂಡಿ, ದುರ್ಗದಹಳ್ಳಿಗಳ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. 2019ರಲ್ಲಿ ಸುರಿದ ಧಾರಾಕಾರ ಮಳೆಗೆ ಗುಡ್ಡಗಳು ಕುಸಿದ ಪರಿಣಾಮ ಹಲವು ಮನೆಗಳು ಹಾನಿಗೊಳಲಾಗಿದ್ದವು. ಗ್ರಾಮಗಳು ಗುರುತು ಸಿಗದಂತೆ ಕೊಚ್ಚಿ ಹೋಗಿದ್ದವು. ಈ ಸಂಬಂಧ ಗ್ರಾಮಸ್ಥರು ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಭೂ ಕುಸಿತ ಉಂಟಾದ ಮಧುಗುಂಡಿಗೆ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ ಮೇರೆಗೆ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ಜೊತೆಗೆ ದುರ್ಗದಹಳ್ಳಿಯ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ಬಳಿಕ ಜಿಲ್ಲಾಡಳಿತ ನಿರಾಶ್ರಿತರಿಗೆ ಬಣಕಲ್ ಬಳಿ ಜಾಗದ ವ್ಯವಸ್ಥೆ ಮಾಡಿತ್ತು.

ಬಣಕಲ್ ಪಂಚಾಯಿತಿ ಸಮೀಪ ಜಾಗ ನೀಡಲಾಗಿದ್ದು, ಈ ಪ್ರದೇಶ ಹೊಸಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಹೊಸಳ್ಳಿ ಪಂಚಾಯತಿಗೆ ಬರಲು ಬಣಕಲ್ ಚಕಮಕ್ಕಿ ಭಾರತಿಬೈಲ್ ಮೂಲಕ 8 ಕಿ.ಮೀ ಸುತ್ತಿಕೊಂಡು ಬರುವ ಪರಿಸ್ಥಿತಿ ಇದೆ. ಇದರಿಂದ ಪಡಿತರ ಪಡೆಯಲು ತುಂಬಾ ದೂರ ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಮೂಲ ಸೌಕರ್ಯ ಕೊಡುವಂತೆ ಗ್ರಾಮಸ್ಥರ ಒತ್ತಾಯ :ನಿರಾಶ್ರಿತರಿಗೆ ನೀಡಿರುವ ನಿವೇಶನದ ನೀಲಿ ನಕ್ಷೆಯೇ ಸರಿಯಿಲ್ಲ. ಇದರಲ್ಲಿ ರಸ್ತೆ ಸರಿಯಿಲ್ಲ. ಕೇವಲ 3 ವಿದ್ಯುತ್‌ ಕಂಬಗಳನ್ನು ಅಳವಡಿಸಿ ವಿದ್ಯುತ್ ಲೈನ್ ಎಳೆಯಲಾಗಿದೆ. ಇದುವರೆಗೆ ವಿದ್ಯುತ್​ ಸಂಪರ್ಕ ಕಲ್ಪಿಸಿಲ್ಲ. ಚರಂಡಿಗೆ ಭೂಮಿ ಅಗೆದಿದ್ದು, ಈ ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಿಲ್ಲ. ವಾರಕ್ಕೊಮ್ಮೆ ಕುಡಿಯುವ ನೀರು ನೀಡುತ್ತಿದ್ದು, ಈ ನೀರು ಸಾಕಾಗುವುದಿಲ್ಲ ಎಂಬುದು ನಿವಾಸಿಗಳ ಅಳಲಾಗಿದೆ. ಇಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ತೆರಳಿದರೆ ಜನ ಪ್ರತಿನಿಧಿಗಳು ಪ್ರೋತ್ಸಾಹ ನೀಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾಡಳಿತ ನಿರಾಶ್ರಿತರು ಅತಿವೃಷ್ಟಿ ಪ್ರದೇಶದಿಂದ ಹೊರ ಬಂದರೆ ಮೂಲ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದು, ಈಗ ಜಾಗ ಮಾತ್ರ ಕೊಟ್ಟು ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ. ಹಾಗಾಗಿ ಸೌಲಭ್ಯಕ್ಕೆ ಒತ್ತಾಯಿಸಿ ನಿರಾಶ್ರಿತರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ಮಧು ಗುಂಡಿ, ಹಲಗಡಕ, ದುರ್ಗದಹಳ್ಳಿ, ಬಿದಿರುತಳದ 40 ನಿರಾಶ್ರಿತ ಕುಟುಂಬಗಳಿಗೆ 2020ರಲ್ಲಿ ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಣಕಲ್‌ನ ಸುಣ್ಣದ ಗೂಡಿನ ಸಮೀಪ ಜಾಗ ನೀಡಲಾಗಿದೆ. ಆದರೆ ಮೂಲಭೂತ ಸೌಕರ್ಯ ಇಲ್ಲದೇ ಇಂದಿಗೂ ಬಹುತೇಕ ನೆರೆ ಸಂತ್ರಸ್ತರು ನೆಲೆ ಕಂಡುಕೊಂಡಿಲ್ಲ.ಕೇವಲ 5 ಕುಟುಂಬಗಳು ಮಾತ್ರ ಇಲ್ಲಿ ವಾಸಿಸುತ್ತಿವೆ. ಈಗ ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ನೀರು ಬಿಡುತ್ತಿರುವುದರಿಂದ ನೆರೆ ಸಂತ್ರಸ್ತರು ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ಹೇಳಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೇ ಇರುವುದರಿಂದ ಮಳೆಗಾಲದ ಮಳೆನೀರು ಮನೆಯೊಳಗೆ ನುಗ್ಗುವ ಆತಂಕ ಎದುರಾಗಿದೆ.

ಇದನ್ನೂ ಓದಿ :ಕೇಂದ್ರ ಬಜೆಟ್: ಬೆಂಗಳೂರಿಗೆ ಮೂಲ ಸೌಲಭ್ಯ: ಕೃಷಿಕರಿಗೆ ಬಡ್ಡಿ ರಹಿತ ಸಾಲದ ಕೊಡುಗೆ ನಿರೀಕ್ಷೆ

ABOUT THE AUTHOR

...view details