ಚಿಕ್ಕಮಗಳೂರು :ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರಿಶೀಲಿಸಿದ್ದಾರೆ. ನಗರದ ಜೂನಿಯರ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ಕೊಠಡಿಗಳ ಪರಿಶೀಲನೆಯನ್ನು ಸಚಿವರು ನಡೆಸಿದರು.
ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 9671 ಇದ್ದು, ಹದಿನೆಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 4,597 ಬಾಲಕರು, 5074 ಬಾಲಕಿಯರು ಪರೀಕ್ಷೆ ಎದುರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಬಾಲಕರು, ಬಾಲಕಿಯರು ಸಮಪಾಲು ಬರೆಯುತ್ತಿದ್ದಾರೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಗೈರಾಗುವುದು ಸಾಮಾನ್ಯ. ಆದರೆ, ಎಸ್ಎಸ್ಎಲ್ಸಿ ರೀತಿ ಪಿಯುಸಿಯಲ್ಲಿ ಗೈರು ಹಾಜರಾಗುವುದಿಲ್ಲ. ಪರೀಕ್ಷೆ ಸುಗಮವಾಗಿ ನಡೆಯುವ ವಿಶ್ವಾಸ ಇದೆ ಎಂದರು.