ಕಾಫಿ ನಾಡಲ್ಲಿ ದತ್ತ ಜಯಂತಿ ಉತ್ಸವ, ಅದ್ಧೂರಿ ಶೋಭಾಯಾತ್ರೆ ಚಿಕ್ಕಮಗಳೂರು:ಈ ಬಾರಿ ಕಾಫಿ ನಾಡಿನ ದತ್ತ ಜಯಂತಿ ಉತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಘಟಾನುಘಟಿ ಬಿಜೆಪಿ ನಾಯಕರು ದತ್ತ ಜಯಂತಿಯಲ್ಲಿ ಹೆಜ್ಜೆ ಹಾಕಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಬೃಹತ್ ಶೋಭಾ ಯಾತ್ರೆಗೆ ಮೆರಗು ತಂದರು. ಇಡೀ ಚಿಕ್ಕಮಗಳೂರು ನಗರ ಕೇಸರಿ ಮಯವಾಗಿತ್ತು.
ಪೊಲೀಸ್ ಸರ್ಪಗಾವಲಿನಲ್ಲಿ ಚಿಕ್ಕಮಗಳೂರಿನ ಶೋಭಾ ಯಾತ್ರೆ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ದತ್ತ ಮಾಲಾಧಾರಿಗಳು, ದತ್ತ ಜಯಂತಿಗೂ ಮುನ್ನ ದಿನ ನಡೆದ ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 15 ಸಾವಿರಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ಸಮ್ಮುಖದಲ್ಲಿ ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆಜಾದ್ ವೃತ್ತದವರೆಗೆ ಬೃಹತ್ ಮೆರವಣಿಗೆ ಸಾಗಿತು.
ವಿವಿಧ ನೃತ್ಯ ಕಲಾ ತಂಡಗಳು, ವಾದ್ಯಮೇಳಗಳು ಶೋಭಾ ಯಾತ್ರೆಯ ಮೆರಗು ಹೆಚ್ಚಿಸಿದವು. ಜೊತೆಗೆ ಶೋಭಾ ಯಾತ್ರೆಯಲ್ಲಿ ಡಿಜೆ ಸದ್ದು ಪ್ರಮುಖ ಆಕರ್ಷಣೆಯಾಗಿತ್ತು. ಕೇಸರಿ ಬಾವುಟ ಹಿಡಿದು ಕುಣಿದು ಕುಪ್ಪಳಿಸುವ ದೃಶ್ಯ ಕಂಡು ಬಂದಿದೆ. ಈ ವೇಳೆ, ರಸ್ತೆಗಳ ಪಕ್ಕದಲ್ಲಿ ನಿಂತಿದ್ದ ಸ್ಥಳೀಯರು ಕಲಾ ತಂಡಗಳ ನೃತ್ಯವನ್ನು ಕಣ್ತುಂಬಿಕೊಂಡರು.
ಕಳೆದೊಂದು ದಶಕದ ನಂತರ ಕಾಫಿ ನಾಡಿನ ದತ್ತ ಜಯಂತಿ ಉತ್ಸವದಲ್ಲಿ ಹಲವು ಘಟಾನುಗಟಿ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ದತ್ತ ಮಾಲಾ ಧಾರಣೆ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಸಂಸದೆ ಶೋಭಾ, ಬಿಜೆಪಿ ನಾಯಕ ಸಿ.ಟಿ. ರವಿ ಹಾಗೂ ಸುನಿಲ್ ಕುಮಾರ್ ಸೇರಿದಂತೆ ರಾಜ್ಯದ ಮಾಜಿ ಹಾಲಿ ಬಿಜೆಪಿ ಶಾಸಕರು ಶೋಭಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಕೂಡ ಈ ಬಾರಿ ದತ್ತೆಮಾಲೆ ಹಾಕಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡಿ ಹೋಮ ಹವನ ನಡೆಸಿದರು. ದತ್ತಪೀಠ ಹಿಂದೂಗಳ ಪೀಠವಾಗಬೇಕು. ಹಿಂದೂಗಳ ಗೌರವ ಎತ್ತಿ ಹಿಡಿವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದರು.
ಮೂಡಿಗೆರೆ ಪಟ್ಟಣದಲ್ಲಿ ಶೋಭಾಯಾತ್ರೆ:ದತ್ತ ಜಯಂತಿ ಪ್ರಯುಕ್ತ ದತ್ತ ಮಾಲಾಧಾರಿಗಳು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೂಡಿಗೆರೆ ಪಟ್ಟಣದಲ್ಲಿ ಇತ್ತೀಚೆಗೆ ಶೋಭಾಯಾತ್ರೆ ಸಂಭ್ರಮದಿಂದ ನಡೆದಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜರುಗಿದ್ದು, ನಂತರ ಅಡ್ಯಂತಾಯ ರಂಗಮಂದಿರದಲ್ಲಿ ಮಾಲಾಧಾರಿಗಳು ಧಾರ್ಮಿಕ ಸಭೆ ನಡೆಸಿದ್ದರು.
ಇದನ್ನೂ ಓದಿ:ಅಯ್ಯಪ್ಪ ಮಾಲಾಧಾರಿಗಳಿಗೆ ತಮ್ಮ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ