ಚಿಕ್ಕಮಗಳೂರು:ಪಕ್ಕವೇ ಸ್ವಚ್ಛಂದ ನದಿಯಿದ್ದರೂ ಕುಡಿಯಲು ನೀರಿಲ್ಲದೆ ಹಳ್ಳಿಯೊಂದರ ಜನರು ಪ್ರತಿನಿತ್ಯ ಪರದಾಡುವ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ.
'ಸಮುದ್ರ ಪಕ್ಕದಲ್ಲಿದ್ದರೂ, ಉಪ್ಪಿಗೆ ಬರ ಅನ್ನೋ' ಮಾತು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳ್ಗಲ್-ಉಳ್ಳೂರು ಕೋರೆ ಗ್ರಾಮದ ಜನರಿಗೆ ಅನ್ವಯಿಸುತ್ತಿದೆ. ಕಳಸ ತಾಲೂಕಿನಲ್ಲಿ ಸೋಮಾವತಿ-ಭದ್ರಾ ನದಿಗಳು ಜನ್ಮ ತಾಳಿ ನಾಡಿನ ಉದ್ದಗಲಕ್ಕೂ ಹರಿದರೂ ಕೂಡ ಈ ಗ್ರಾಮದ ಜನ ನೀರಿಗಾಗಿ 8 ಕಿ.ಮೀ. ಪೈಪ್ಗಳ ಮೂಲಕ ಹರಸಾಹಸಪಡಬೇಕು.
ಆದರೂ ಕುಡಿಯಲು ಮಾತ್ರ ನೀರಿಲ್ಲ. ಸೋಮಾವತಿ ನದಿ ಮಧ್ಯದ ಚೆಕ್ ಡ್ಯಾಮ್ನಿಂದ ಪೈಪ್ ಮೂಲಕವೇ ನೀರು ಬರಬೇಕು. ಮಳೆ ಜೋರಾಗಿ ಬಂದರೆ ನೀರಿನ ಅಬ್ಬರಕ್ಕೆ ಪೈಪ್ಗಳು ಕೊಚ್ಚಿ ಹೋಗುತ್ತದೆ. ನದಿಯಲ್ಲಿ ತೇಲಿಕೊಂಡು ಬಂದಾಗ ಗ್ರಾಮಸ್ಥರು ಮತ್ತೆ ಪೈಪ್ಗಳನ್ನು ಎಳೆದು ಪಕ್ಕಕ್ಕೆ ಹಾಕಿ ಮಳೆ ಕಮ್ಮಿಯಾದ ಬಳಿಕ ಬಾಳ್ಗಲ್ ಹಾಗೂ ಉಳ್ಳೂರು ಕೋರೆ ಗ್ರಾಮದ ಜನರೆಲ್ಲಾ ಸೇರಿ ಪೈಪ್ಗಳನ್ನು ಮತ್ತೆ ಜೋಡಿಸಬೇಕು. ಮತ್ತೆ ನೀರಿನ ಸಮಸ್ಯೆಯಾದಾಗ ಗ್ರಾಮಸ್ಥರು ತಮ್ಮ ಕೆಲಸ ಬಿಟ್ಟು ನೀರಿನ ಪೈಪ್ ದುರಸ್ತಿ ಮಾಡಬೇಕು. ಈ ರೀತಿ ಮಾಡಿದರೆ ಮಾತ್ರ ಕುಡಿಯಲು ಗ್ರಾಮಕ್ಕೆ ನೀರು ಬರುತ್ತದೆ ಎಂದು ಗ್ರಾಮಸ್ಥರು ಕುಡಿಯುವ ನೀರಿನ ಬಗ್ಗೆ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮಸ್ಥರು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ ಮಾಡುತ್ತಿದ್ದು, ಬಾಳ್ಗಲ್ ಗ್ರಾಮದಿಂದ ಸೋಮಾವತಿ ನದಿಗೆ 8 ಕಿ.ಮೀ. ದೂರವಿದೆ. ನದಿ ಹಾಗೂ ಕಾಡಿನ ಮಧ್ಯೆ ಒಬ್ಬಿಬ್ಬರು ಹೋಗುವುದಕ್ಕೆ ಆಗಲ್ಲ. ಒಟ್ಟಿಗೆ 15-20 ಜನ ಹೋಗಬೇಕು. ನಮ್ಮ ನೀರಿನ ದಾಹದ ನೋವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಅಂತ ಹಳ್ಳಿಗರು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ಗ್ರಾಮಗಳಿಗೆ ಸೋಮಾವತಿ ನದಿಯಿಂದಲೇ ನೀರು ಬರಬೇಕು. ಇಲ್ಲಿ 80 ರಿಂದ 100 ಮನೆಗಳಿವೆ. ಗಿರಿಜನ ಹಾಸ್ಟೆಲ್, ಕೇಂದ್ರ ವಾಲ್ಮೀಕಿ ಆಶ್ರಮ ಶಾಲೆಗಳಿದ್ದು, 150ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಂಗನವಾಡಿಯೂ ಇದ್ದು ನೀರಿಲ್ಲದೆ ಮಕ್ಕಳಿಗೆ ರಜೆ ನೀಡಿದ್ದಾರೆ. ನೀರಿನ ವ್ಯವಸ್ಥೆಗೆ ಗ್ರಾಮಸ್ಥರೇ ಬೇಕಾಗಿದ್ದೆಲ್ಲಾ ತಂದು ಕೊಡುತ್ತೇವೆ ಎನ್ನುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಾರೆಯಾಗಿ, ಸಮುದ್ರದ ತಳದಲ್ಲಿ ಉಪ್ಪಿಗೆ ಬರ. ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತುಗಳು ಕಾಫಿನಾಡಿಗೆ ಹೇಳಿ ಮಾಡಿಸಿದಂತಿದೆ. ಸಪ್ತ ನದಿಗಳ ನಾಡು ಅಂತ ಕರೆಸಿಕೊಳ್ಳುವ ಕಾಫಿನಾಡಲ್ಲಿ ನೀರಿಗೆ ಬರ ಅಂದರೆ ಯಾರೂ ನಂಬಲ್ಲ. ಅದರಲ್ಲೂ ನದಿಗಳ ಇಕ್ಕೆಲಗಳ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಅಂದರೆ ನಂಬಲು ಅಸಾಧ್ಯವಾದ ಮಾತು. ಆದರೆ, ಇದು ವಾಸ್ತವ ಸ್ಥಿತಿ. ಸರ್ಕಾರ 2 ಲಕ್ಷ ಹಣ ಖರ್ಚು ಮಾಡಿದರೆ ಆ ಹಳ್ಳಿಗರಿಗೆ ಶಾಶ್ವತ ಕುಡಿಯೋ ನೀರಿನ ಸೌಲಭ್ಯ ಸಿಗಲಿದೆ ಎನ್ನುವುದು ಜನರ ಆಶಯವಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ - ವಿಡಿಯೋ