ಚಿಕ್ಕಮಗಳೂರು:ಜನಸಾಮಾನ್ಯರು ಕೊರೊನಾ ವೈರಸ್ ಬಗ್ಗೆ ಆತಂಕ ಪಡುವುದು ಬೇಡ. ಆದರೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್‌ನ ಎಚ್ಚರಿಕೆ ಕ್ರಮ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡಿ 427ಕ್ಕೂ ಹೆಚ್ಚು ಜನ ಮರಣ ಹೊಂದಿರುವ ಬಗ್ಗೆ ವರದಿಗಳಾಗಿವೆ. ಅಲ್ಲದೇ ನಮ್ಮ ಪಕ್ಕದ ರಾಜ್ಯವಾದ ಕೇರಳದಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ, ನಮ್ಮ ಜಿಲ್ಲೆಗೂ ರೋಗ ಹರಡುವ ಸಾಧ್ಯತೆ ಇರುವ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಾಮಾನ್ಯವಾಗಿ ವೈರಾಣು ಬಾಧಿತರಿಗೆ ವಿಪರೀತ ಜ್ವರ, ತಲೆನೋವು, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಬೇಧಿ ಕಂಡು ಬರುತ್ತದೆ. ವೈರಸ್ ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಸೋಂಕಿತರ ಜೊತೆ ನಿಕಟ ಸಂಪರ್ಕ ಹೊಂದಿದಾಗ ವೈರಸ್‌ಗಳು ಹರಡುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಕೈಯನ್ನು ಆಗಾಗ ತೊಳೆದುಕೊಳ್ಳಬೇಕು ಎಂದು ಹೇಳಿದರು.
ಈ ವೈರಸ್‌ನ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಬೇಕು. ಅಲ್ಲಿನ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ಪೂರಕ ಔಷಧ ದಾಸ್ತಾನುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ವೈದ್ಯರಿಗೆ ಸೂಚನೆ ನೀಡಿದರು.
ಸೋಂಕಿತ ವ್ಯಕ್ತಿಗೆ ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಅಲ್ಲಿನ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು. ಜನಸಾಮಾನ್ಯರಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳ ಬಗ್ಗೆ ಅರಿವು ಮೂಡಿಸಬೇಕು. ರೋಗಬಾರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು ಎಂದರು.
ಇನ್ನು ಕೇರಳದಿಂದ ಎನ್.ಆರ್.ಪುರಕ್ಕೆ ಹೆಚ್ಚಿನ ಜನರು ಬಂದು ಹೋಗುವ ಹಿನ್ನೆಲೆ ಅಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಬೇಕು ಮತ್ತು ಕೊರೊನಾ ವೈರಸ್ ಬಾಧಿತ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಹಾಗೂ ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಬಗ್ಗೆ ದೃಢೀಕರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.