ಚಿಕ್ಕಮಗಳೂರು: ಕಾಫಿನಾಡಲ್ಲಿ ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಎನ್ಆರ್ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ತೋಟದ ಬೇಲಿ ವಿಚಾರವಾಗಿ ವೈದ್ಯ ಗಣೇಶ್ ಎಂಬವರ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕ ಹಾಗೂ ಪಕ್ಕದ ತೋಟದ ಕಾರ್ಮಿಕನ ಜೊತೆ ಜಗಳವಾಗುತ್ತಿತ್ತು. ವೈದ್ಯ ಗಣೇಶ್ ಅವರ ತೋಟದ ಕಾರ್ಮಿಕನ ಮೇಲೆ ಪಕ್ಕದ ತೋಟದ ಕಾರ್ಮಿಕ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.
ಈ ಘಟನೆಯನ್ನು ಕಾರ್ಮಿಕ ಕೂಡಲೇ ವೈದ್ಯ ಗಣೇಶ್ ಗಮನಕ್ಕೆ ತಂದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲು ಸ್ಥಳಕ್ಕೆ ಹೋದಾಗ, ಹಲ್ಲೆ ಮಾಡಿದ ಕಾರ್ಮಿಕ ವೈದ್ಯ ಗಣೇಶ್ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಹೊಟ್ಟೆ ಹಾಗೂ ಕೈಗೆ ಚಾಕುವಿನಿಂದ ಗಂಭೀರವಾಗಿ ಇರಿದಿದ್ದು, ಸ್ಥಳದಲ್ಲೇ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ.
ಕೂಡಲೇ ತೋಟದ ಕಾರ್ಮಿಕರು ಅವರನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಇದೇ ವೇಳೆ ಆ ಭಾಗದಲ್ಲಿ ಪ್ರವಾಸದಲ್ಲಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಷಯ ತಿಳಿದು ವೈದ್ಯರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಹಲ್ಲೆ ಮಾಡಿದ ಕಾರ್ಮಿಕನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.