ಚಿಕ್ಕಮಗಳೂರು:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭಾನುವಾರ ಶೃಂಗೇರಿ ಶಾರದಾ ಪೀಠದಲ್ಲಿ ಚಂಡಿಯಾಗ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಹಾಗೂ ರಾಜ್ಯ ಸುಭೀಕ್ಷವಾಗಿ ಇರಬೇಕು ಎಂದು ಡಿ ಕೆ ಶಿವಕುಮಾರ್ ಅವರು ಯಾಗ ಮಾಡಿಸುತ್ತಿದ್ದಾರೆ. ಶನಿವಾರ ಬೆಳಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಬೆಳ್ತಂಗಡಿಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಶೃಂಗೇರಿ ಆಗಮಿಸಿದ್ದು, ಇಂದು ಶಾರದಾಂಬೆ ಸನ್ನಿಧಿಯಲ್ಲಿ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಸೇರಿ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿಕೆಶಿ ಆಪ್ತರಾದ ಖ್ಯಾತ ಜ್ಯೋತಿಷಿ ದ್ವಾರಕನಾಥ್ ನೇತೃತ್ವದಲ್ಲಿ ಇಂದು ಶೃಂಗೇರಿ ಸನ್ನಿಧಿಯಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾಗಿ 12 ಗಂಟೆ ವೇಳೆಗೆ ಪೂರ್ಣಾಹುತಿಯಲ್ಲಿ ಚಂಡಿಕಾ ಯಾಗ ಪೂರ್ಣಗೊಳ್ಳಲಿದೆ. ಜ್ಯೋತಿಷಿ ದ್ವಾರಕಾನಾಥ್ ಮಾತನಾಡಿ, ಡಿಕೆಶಿ ಯಾರ ಸಲಹೆ ಮೇರೆಗೂ ಶೃಂಗೇರಿಗೆ ಬಂದಿಲ್ಲ. ಶೃಂಗೇರಿ ಮಹಾ ಸಂಸ್ಥಾನ ನಮಗೆ ಪ್ರತ್ಯಕ್ಷ ದೇವರು ಹಾಗೂ ಗುರುಗಳು. ಅವರ ಆಶೀರ್ವಾದಕ್ಕಾಗಿ ಬಂದಿದ್ದಾರೆ. ಡಿಕೆ ಶಿವಕುಮಾರ್ ನನ್ನ ಸಲಹೆ ಕೇಳುತ್ತಾರೆ, ನಾನು ಚಿಕ್ಕ ವಯಸ್ಸಿನಿಂದ ಅವರನ್ನು ನೋಡಿದ್ದೀನಿ. ಅವರು ದಿನೆ ದಿನೇ ಬೆಳೆಯಬೇಕು, ರಾಜ್ಯ ರಾಷ್ಟ್ರಕ್ಕೆ ಬೇಕಾಗುವವರಾಗಬೇಕು, ಅವರಿಗೆ ನನ್ನ ಆಶೀರ್ವಾದ ಇದ್ದೇ ಇರುತ್ತದೆ ಎಂದರು.
ಡಿ.ಕೆ ಶಿವಕುಮಾರ್ ಅವರು ಸ್ವಾರ್ಥಕ್ಕಾಗಿ ಪೂಜೆ ಮಾಡಲು ಬಂದಿಲ್ಲ. ರಾಜ್ಯದ ಸುಸ್ಥಿತಿಗೆ ಮತ್ತು ಪ್ರಜಾಸೇವೆಗಾಗಿ ಪ್ರಾರ್ಥಿಸಲು ಬಂದಿದ್ದಾರೆ. ಪ್ರಜಾ ಕಲ್ಯಾಣಕ್ಕಾಗಿ ಪೂಜೆ ಮಾಡಲು ಶನಿವಾರ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಚಂಡಿಕಾ ಹೋಮ ಮಾಡುವುದು ವಿಶೇಷ. ಹೀಗಾಗಿ ಭಾನುವಾರ ಬೆಳಗ್ಗೆ ಚಂಡಿಕಾ ಯಾಗ ನಡೆಯಲಿದೆ ಎಂದು ತಿಳಿಸಿದರು. ಸುಮಾರು ಹತ್ತಕ್ಕೂ ಹೆಚ್ಚು ಋತ್ವಿಜರು ಹಾಗೂ ಪುರೋಹಿತರನ್ನು ಒಳಗೊಂಡ ತಂಡ ಶೃಂಗೇರಿ ಕ್ಷೇತ್ರದಲ್ಲಿ ಚಂಡಿಕಾಯಾಗ ಕೈ ಗೊಳ್ಳಲಿದೆ. ಭಾನುವಾರ ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿರೋ ಡಿಕೆಶಿ ಹಾಗೂ ಪತ್ನಿ ಚುನಾವಣಾ ಪ್ರಚಾರಕ್ಕೂ ಮುನ್ನ ಹೋಮ ಹವನ ನಡೆಸುತ್ತಿದ್ದಾರೆ.