ಚಿಕ್ಕಮಗಳೂರು:ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ದೀಪಾವಳಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ ಆರಂಭಗೊಳ್ಳುತ್ತದೆ. ಹಾಗಾಗಿ ಮುಂಜಾನೆ 4 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬೆಟ್ಟಕ್ಕೆ ಆಗಮಿಸುತ್ತಾರೆ. ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಇಂದು ದೇವಿಯ ದರ್ಶನ ಮಾಡಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತದಲ್ಲಿರುವ ದೇವಿರಮ್ಮನ ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಪೂಜೆ ನಡೆಯುತ್ತದೆ. ಈ ಬೆಟ್ಟಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಬೆಟ್ಟಗುಡ್ಡಗಳನ್ನು ಅಲೆದಾಡಿಕೊಂಡೆ ಬರಬೇಕು. ಜತೆಗೆ ಬೆಟ್ಟ ಏರುವಾಗ ಯಾವುದೇ ಆಹಾರವನ್ನು ಸ್ವೀಕರಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ. ದೇವರಿಗೆ ಪೂಜೆ ಸಲ್ಲಿಸಿ ಸಂಜೆ ಈ ಬೆಟ್ಟದಲ್ಲಿ ದೀಪ ಬೆಳಗಿದ ನಂತರವಷ್ಟೇ ಊಟ ಮಾಡಬೇಕು. ಬೆಟ್ಟದಲ್ಲಿ ದೀಪ ಬೆಳಗಿದ ಬಳಿಕ ಜನರು ಅದಕ್ಕೆ ಆರತಿ ಬೆಳಗಿ ಮನೆಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸುತ್ತಾರೆ.