ಹಾಸನ ಟಿಕೆಟ್ ವಿಚಾರವಾಗಿ ದೇವೇಗೌಡರು ತೀರ್ಮಾನ ತೆಗೆದುಕೊಳ್ಳುತ್ತಾರೆ : ಹೆಚ್‍ಡಿ ಕುಮಾರಸ್ವಾಮಿ ಚಿಕ್ಕಮಗಳೂರು : ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ದೇವೇಗೌಡರು ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ ಯಾರೂ ಗೊಂದಲ ಸೃಷ್ಟಿಸುವ ಅಗತ್ಯ ಇಲ್ಲ. ಕ್ಷೇತ್ರದ ಜನರ ಭಾವನೆಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ದೇವರೂರಿಗೆ ಪಂಚರತ್ನ ರಥಯಾತ್ರೆ ಆಗಮಿಸಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ದೇವೇಗೌಡರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಸರ್ಕಾರ ಸರ್ಕಾರಿ ನೌಕರರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ನೀವೇ ತಿಳಿದುಕೊಳ್ಳಬೇಕು. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ಧೇವೆ ಎಂದು ಸಿಎಂ ಹೇಳುತ್ತಾರೆ. ಆದರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಬರವಣಿಗೆ ಮೂಲಕ ನೀಡಬೇಕೆಂದು ಹೇಳುತ್ತಾರೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ ತಕ್ಷಣ ಇದು ಜಾರಿ ಆಗುತ್ತಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕನಕಪುರದಲ್ಲಿ ತಯಾರಾದ ಕುಕ್ಕರ್ಗಳು ಡುಬ್ಲಿಕೇಟು, ಬ್ಲಾಸ್ಟ್ ಆಗುತ್ತವೆ ಎಚ್ಚರಿಕೆಯಿಂದಿರಿ: ರಮೇಶ್ ಜಾರಕಿಹೊಳಿ
ಇನ್ನು ಮೋದಿಯವರು ಇತರ ನಾಯಕರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಛತ್ರಿ ಹಿಡಿದಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳುತ್ತಾರೆ. ತಾವು ರಾಜ್ಯಕ್ಕೆ ಏನು ಮಾಡಿದ್ದೇವೆ ಎಂದು ಹೇಳಿಲ್ಲ. ಇನ್ನು ಯಡಿಯೂರಪ್ಪರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಗೊತ್ತಾಗುತ್ತದೆ. ವಯಸ್ಸಿನ ಕಾರಣ ನೀಡಿ ಬಿಜೆಪಿ ಅವರಿಂದ ನಿವೃತ್ತಿ ಪಡೆದಿದೆ. ಇದೀಗ ಒಂದು ಸಮುದಾಯದ ಮತ ಪಡೆಯಲು ಯಡಿಯೂರಪ್ಪರನ್ನು ಮುಂದಿಟ್ಟಿದೆ ಎಂದು ಟೀಕಿಸಿದರು.
ಯಡಿಯೂರಪ್ಪರನ್ನು ಮೋದಿಯವರು ಹೊಗಳಿದರು. ಯಡಿಯೂರಪ್ಪರ ಮೇಲೆ ಅಷ್ಟೊಂದು ಪ್ರೀತಿ, ಅನುಕಂಪ ಇದ್ದಿದ್ದರೆ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಮೈತ್ರಿ ಸರ್ಕಾರ ನಂತರ ಯಡಿಯೂರಪ್ಪ 2 ವರ್ಷ ಸರ್ಕಾರ ನಡೆಸಿದರು. ಬಳಿಕ ಅವರನ್ನು ಯಾವ ರೀತಿ ನಡೆಸಿಕೊಂಡಿದೆ ಎಂದರು. ಬಿಜೆಪಿ ಇಂದು ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರನ್ನು ಮೂಲೆ ಗುಂಪು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರ್ಯಾಲಿ ವಿಚಾರ ಕುರಿತು ಮಾತನಾಡಿ, ರ್ಯಾಲಿಯಲ್ಲಿ ಅವರು ರಾಜ್ಯಕ್ಕೆ ಏನು ಕೊಡುತ್ತೇವೆ ಎಂದು ಹೇಳಿಲ್ಲ. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರನ್ನು ನೆನಪಿಸಿಕೊಂಡು, ಅನುಕಂಪ ಗಿಟ್ಟಿಸಿ ಕೊಳ್ಳುತ್ತಿದ್ದಾರೆ. ಅವರು ರಾಜಕೀಯ ಮಾಡುವಾಗ ಇವರು ರಾಜಕೀಯಕ್ಕೆ ಬಂದೇ ಇರಲಿಲ್ಲ ವ್ಯಂಗ್ಯವಾಡಿದರು.
ಇದನ್ನೂ ಓದಿ:ಹಾಸನ ಟಿಕೆಟ್ ಡಿಸಿಶನ್ ಪೆಂಡಿಂಗ್; ದೇವೇಗೌಡರ ನಿರ್ಧಾರದ ಕುತೂಹಲ