ಚಿಕ್ಕಮಗಳೂರು:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರು ಅಕ್ರಮವಾಗಿ ಸಾವಿರಾರು ಕೋಟಿ ರೂ. ಆಸ್ತಿ ಸಂಪಾದಿಸಿದ್ದಾರೆ ಎಂದು ಇತ್ತೀಚೆಗೆ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಮೈಸೂರಿನ ಲಕ್ಷ್ಮಣ್ ವಿರುದ್ಧ ಚಿಕ್ಕಮಗಳೂರು ನಗರದ 2ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ತೆರಳಿದ ಸಿ.ಟಿ.ರವಿ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ಮಾನನಷ್ಟ ಮಾಡಿದ್ದಾರೆಂದು ಆರೋಪಿಸಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ ಜ.21 ರಂದು ಸಿ.ಟಿ.ರವಿ ಹಾಗೂ ಸಾಕ್ಷಿದಾರರಿಂದ ಹೇಳಿಕೆ ಪಡೆಯಲು ದಿನ ನಿಗದಿ ಮಾಡಿದೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಹಲವು ಬಾರಿ ಶಾಸಕ ಸಿ.ಟಿ.ರವಿ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಸರಕಾರಿ ಕಾಮಗಾರಿಗಳ ಗುತ್ತಿಗೆಯನ್ನು ಸಿ.ಟಿ.ರವಿ ಅವರ ಸಂಬಂಧಿಯೊಬ್ಬರು ಪಡೆದುಕೊಂಡು ಕಳಪೆ ಕಾಮಗಾರಿ ನಡೆಸಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದರು.
ಸದ್ಯ ಸಿ.ಟಿ.ರವಿ ಅವರು ತಮ್ಮ ಮೇಲಿನ ಆರೋಪಕ್ಕೆ ಪ್ರತಿಯಾಗಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಕಾನೂನು ಹೋರಾಟಕ್ಕಿಳಿದಿದ್ದಾರೆ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಹೊರ ಬಂದ ಬಳಿಕ ಮಾತನಾಡಿದ ಸಿ.ಟಿ.ರವಿ, ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಯಾರ ಮೇಲೆ ಏನು ಬೇಕಾದರೂ ಹೇಳ ಬಹುದು ಅನ್ನುವಂತಹ ಮನಸ್ಥಿತಿಗೆ ಕೆಲವರು ಬಂದಿದ್ದಾರೆ. ಸುಳ್ಳು ಆರೋಪ ಮಾಡಿದ ಮೇಲೂ ಭಂಡತನದಿಂದ ಅದನ್ನು ಸಮರ್ಥಿಸಿಕೊಳ್ಳುವ ಕೆಟ್ಟ ಮನಸ್ಥಿತಿ ಅವರಲ್ಲಿದೆ. ಅವರ ಹೇಳಿಕೆಯಿಂದ ಸಾರ್ವಜನಿಕರಲ್ಲಿ ತನ್ನ ಮೇಲೆ ತಪ್ಪು ಅಭಿಪ್ರಾಯ ಮೂಡಿದ್ದು, ಇದಕ್ಕೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇನೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ: ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ. ಅವರಿಗೆ ಬಿಜೆಪಿ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಬಿಜೆಪಿಯವರಿಗೆ ಒಂದು ಕಾನೂನು, ಕಾಂಗ್ರೆಸ್ಗೆ ಒಂದು ಅಂತ ಎಲ್ಲೂ ಇಲ್ಲ. ತಪ್ಪು ಯಾರು ಮಾಡಿದ್ರು ತಪ್ಪೇ, ಶಿಕ್ಷೆ ಆಗಬೇಕು ಎಂದರು.