ಕೆರೆಗೆ ಬಿದ್ದ ಜಿಂಕೆ ರಕ್ಷಣೆ.. ತೋಟಕ್ಕೆ ನುಗ್ಗಿ ಬೆಳೆ ನಾಶಪಡಿಸಿದ ಕಾಡಾನೆ ಚಿಕ್ಕಮಗಳೂರು :ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಗ್ರಾಮದಲ್ಲಿ ಇಂದು ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಲು ಮುಂದಾಗಿದ್ದು, ಈ ವೇಳೆ ತಪ್ಪಿಕೊಂಡು ಓಡುವಾಗ ಜಿಂಕೆ ಹೆಗ್ಗುಡ್ಲು ಗ್ರಾಮದ ಕೆರೆಗೆ ಬಿದ್ದಿದೆ.
ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನು ನೋಡಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮೂಡಿಗೆರೆ ಆರಿಫ್ ಎಂಬವರಿಗೆ ಕರೆ ಮಾಡಿದ್ದಾರೆ. ಬಳಿಕ ಹೆಗ್ಗುಡ್ಲು ಗ್ರಾಮಸ್ಥರು ಮತ್ತು ಆರಿಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಕೆರೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಂಕೆಯ ಕೊಂಬಿಗೆ ಹಗ್ಗ ಬಿಗಿದು ಕೆರೆಯಿಂದ ಮೇಲೆತ್ತಲಾಯಿತು. ಕೆರೆಯಿಂದ ಹೊರಬರುತ್ತಿದ್ದಂತೆ ಜಿಂಕೆ ಗಾಬರಿಗೊಂಡು ಅತ್ತಿಂದಿತ್ತ ನೆಗೆದಿದೆ. ಬಳಿಕ ಜಿಂಕೆಯನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಡಲಾಗಿದೆ.
ತೋಟಕ್ಕೆ ನುಗ್ಗಿದ ಕಾಡಾನೆ :ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಆನೆಗಳ ದಾಳಿಗೆ ಗ್ರಾಮದ ಜನರು ಹಾಗೂ ರೈತರು ಹೈರಾಣಾಗಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಬಳಿಯ ಅರೇನೂರು ಗ್ರಾಮದಲ್ಲಿ ಮಲ್ಲೇಶ್ ಗೌಡ ಹಾಗೂ ಮಹೇಂದ್ರ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬೆಳೆಗಳನ್ನು ನಾಶಪಡಿಸಿವೆ. ಸುಮಾರು 30 ತೆಂಗಿನ ಮರ, ನೂರಾರು ಅಡಕೆ ಗಿಡ, ಬಾಳೆ, ಕಾಫಿ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿವೆ. ಗ್ರಾಮದ ಸುತ್ತಮುತ್ತ 8 ಕಾಡಾನೆಗಳು ಬೀಡು ಬಿಟ್ಟಿದ್ದು, ರೈತರ ಜಮೀನುಗಳ ಮೇಲೆ ದಾಳಿ ನಡೆಸುತ್ತಿವೆ.
ಕಳೆದ ಕೆಲವು ದಿನಗಳ ವ್ಯಕ್ತಿಯೊಬ್ಬ ಕಾಡಾನೆ ದಾಳಿಗೆ ಬಲಿಯಾಗಿದ್ದ. ಮೃತ ವ್ಯಕ್ತಿಯನ್ನು ಕಿನ್ನಿ ಎಂದು ಗುರುತಿಸಲಾಗಿತ್ತು. ವ್ಯಕ್ತಿಯ ಮೃತದೇಹವನ್ನು ತರಲು ಅರಣ್ಯ ಸಿಬ್ಬಂದಿ ಹರಸಾಹಸಪಟ್ಟಿದ್ದರು. ಬಳಿಕ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಇದೀಗ ಮತ್ತೆ ಕಾಡಾನೆ ದಾಳಿ ಮುಂದುವರೆದಿದ್ದು, ಗ್ರಾಮಸ್ಥರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗ್ರಾಮದ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಇದರಿಂದಾಗಿ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಭಯಪಡುವಂತಾಗಿದೆ. ಅಲ್ಲದೇ ತೋಟದ ಕೆಲಸಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದು, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಚಿಕ್ಕಮಗಳೂರು: ಕಾಡುಕೋಣ ದಾಳಿಯಿಂದ ರೈತನಿಗೆ ಗಂಭೀರ ಗಾಯ