ಚಿಕ್ಕಮಗಳೂರು: ಜಿಲ್ಲೆಯ ಕಡೂರು ಪಟ್ಟಣದ ಆರ್ಎಸ್ಎಸ್ ಮುಖಂಡ ಡಾ. ಶಶಿಧರ್ ಚಿಂದಿಗೆರೆ ಕಾರಿನ ಮೇಲೆ ಅಶ್ಲೀಲ ಪದ ಬರೆದು ಕೊಲೆ ಬೆದರಿಕೆ ಹಾಕಲಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯವನ್ನು ಎಸಗಿದ ಇಬ್ಬರು ಅಪ್ರಾಪ್ತ ಬಾಲಕರ ಪತ್ತೆ ಹಚ್ಚಲಾಗಿದೆ.
ಕಳೆದ 24ರ ರಾತ್ರಿ ಲಕ್ಷ್ಮೀಶ್ ನಗರದ ನಿವಾಸಿ ಚಾರ್ಟೆಡ್ ಇಂಜಿನಿಯರ್ ಆಗಿರುವ ಹಾಗೂ ಹಿಂದೂ ಸಂಘಟನೆಯ ಮುಖಂಡ ಶಶಿಧರ್ ಚಿಂದಿಗೆರೆ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳಲ್ಲಿ ಗಾಳಿ ಬಿಟ್ಟು, ಬಾನೆಟ್, ಗ್ಲಾಸ್ ಮತ್ತು ಎಡ ಡೋರ್ ಮೇಲೆ ಕಲ್ಲಿನಿಂದ ಗೀಚಿ, ಅಶ್ಲೀಲ ಮತ್ತು ಕೊಲೆ ಬೆದರಿಕೆ ಪದ ಬರೆಯಲಾಗಿತ್ತು.
ಈ ಬಗ್ಗೆ ಕಡೂರು ಠಾಣಾಧಿಕಾರಿ ರಮ್ಯಾ ನೇತೃತ್ವದಲ್ಲಿ ತನಿಖೆ ನಡೆಸಿ ಸಾಂಧರ್ಬಿಕ ಸಾಕ್ಷ್ಯಗಳ ಆಧಾರದ ಮೇರೆಗೆ 48 ಗಂಟೆಯೊಳಗಾಗಿ ಇಬ್ಬರು ಬಾಲಕರ ಪತ್ತೆ ಮಾಡಲಾಗಿದೆ. ಅಂದು ರಾತ್ರಿ ಕಡೂರಿನಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಿಕೊಂಡು ವಾಪಸ್ ಹೋಗುತ್ತಿದ್ದಾಗ ಬಾಲಕರು ಈ ಕೃತ್ಯವನ್ನು ಬಾಲಕರು ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರಣವೇನು?:ನಾವು ಈ ತರಹದ ಕಾರನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆಗದಿದ್ದರೂ ಪರವಾಗಿಲ್ಲ. ಇದನ್ನು ಹಾಳು ಮಾಡೋಣವೆಂದು ಬಾಲಕರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಕಲಂ 427, 505(2), 506ರಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಆರ್ಎಸ್ಎಸ್ ಮುಖಂಡನ ಕಾರಿನ ಮೇಲೆ ಜಿಹಾದ್ ಎಂದು ಬರೆದು ಕೊಲೆ ಬೆದರಿಕೆ