ಕರ್ನಾಟಕ

karnataka

ಕಾಫಿನಾಡಿನಲ್ಲಿ ಮಳೆ ಅವಾಂತರ: ಮನೆಗಳು ಕುಸಿತ, ಹೊಳೆಯಲ್ಲಿ ತೇಲಿ ಹೋಗುತ್ತಿರುವ ಶವ!

By

Published : Jul 16, 2022, 7:22 PM IST

ಚಿಕ್ಕಮಗಳೂರಲ್ಲಿ ಮಳೆ ಅವಾಂತರ ಮುಂದುವರಿದಿದೆ. ಜೀವ ಹಾನಿ ಜೊತೆ ಮನೆಗಳಿಗೂ ಹಾನಿಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

Chikkamagaluru rain
ಚಿಕ್ಕಮಗಳೂರು ಮಳೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆ ಹಿನ್ನೆಲೆ ಭದ್ರಾ ನದಿಯ ಉಪನದಿ ಉಲಿಗೆ ಹೊಳೆ ಉಕ್ಕಿ ಹರಿಯುತ್ತಿದೆ. ವಸಂತಪುರ-ಬಿಕ್ಕರಣೆ ನಡುವೆ ಹೊಳೆಯಲ್ಲಿ ಮೃತದೇಹ ತೇಲಿಹೋಗಿದೆ. ಮಹಿಳೆಯ ಮೃತದೇಹ ಇರಬಹುದು ಮತ್ತು ಕುಂದೂರು ಸಾರಗೊಡು ಭಾಗದಿಂದ ತೇಲಿ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆ ಮೇಲೆ ಬಿತ್ತು ಮರ: ಜಿಲ್ಲೆಯಲ್ಲಿ ಮಳೆಗೆ ಹಲವು ಮನೆಗಳು ಕುಸಿದಿವೆ. ಮೂಡಿಗೆರೆ ತಾಲೂಕಿನ ಪಟ್ಟದೂರು ಗ್ರಾಮದ ಹಾಲಮ್ಮ ಹೊನ್ನಯ್ಯ ಅವರ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಆಗಿದೆ. ಗ್ರಾಮಕ್ಕೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಿದ್ದಾರೆ.

ಮನೆ ಕುಸಿತ:ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬರಿಗೆ ಎಂಬಲ್ಲಿ ಮನೆ ಕುಸಿತವಾಗಿದೆ. ಎರಡು ದಿನದ ಹಿಂದೆ ಇದೇ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿತಗೊಂಡಿತ್ತು. ಸದ್ಯ ಲಲಿತ ಮಂಜುನಾಥ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಸಂಪೂರ್ಣ ಹಾರಿ ಹೋಗಿ, ಗೋಡೆ ಕುಸಿತವಾಗಿದೆ.

ಚಿಕ್ಕಮಗಳೂರಿನಲ್ಲಿ ಮಳೆ - ಭಾರಿ ಅವಾಂತರ

ಮನೆಗಳಿಗೆ ಹಾನಿ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜಾದ್​ನಗರದಲ್ಲಿ ಯಮುನಾ ಎಂಬುವವರ ಮನೆ ಮೇಲ್ಛಾವಣಿಯ ಹಂಚುಗಳಿಗೆ ಹಾನಿ ಆಗಿದೆ. ಕೊಟ್ಟಿಗೆಹಾರದಲ್ಲಿ ಸುರಿದ ಮಳೆಗೆ ಹತ್ತಾರು ಮನೆಗಳಿಗೆ ಹಾನಿ ಆಗಿದ್ದು, ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಣಕಲ್ ಹೋಬಳಿಯ ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಿ ಗ್ರಾಮದಲ್ಲಿ ನಿನ್ನೆ ಸುರಿದ ಭೀಕರ ಮಳೆಗೆ ನೇತ್ರ ಅವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ.

ಇದನ್ನೂ ಓದಿ:ಬೈಕ್‌ ಅಪಘಾತ ತಪ್ಪಿಸಲು ಹೋಗಿ ಸೇತುವೆ ಮೇಲಿಂದ ನದಿಗೆ ಬಿದ್ದ ಕಾರು: ದಂಪತಿ ಪಾರು

ABOUT THE AUTHOR

...view details