ಚಿಕ್ಕಮಗಳೂರು:ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ತುಂಬಾ ಅದ್ಧೂರಿಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಜಯಂತಿ ಆಚರಣೆ ಮಾಡುತ್ತಿದ್ದು, ಭಾನುವಾರದಿಂದ 26ರವರೆಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದ ಉದ್ದಕ್ಕೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಹೌದು, ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಈಗಾಗಲೇ ಅಧಿಕೃತ ಚಾಲನೆ ದೊರೆತಿದ್ದು, ಈ ಭಾರಿ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲಾಧಾರಣೆ ಮಾಡಲು ಮುಂದಾಗಿದ್ದಾರೆ. ಜಿಲ್ಲಾದ್ಯಂತ 28 ಚೆಕ್ ಪೋಸ್ಟ್, ಸಿಸಿ ಟಿವಿ ಅಳವಡಿಗೆ ಮಾಡಲಾಗಿದೆ. ಪ್ರತಿ ಚೆಕ್ ಪೋಸ್ಟ್ಗೂ ವಿಶೇಷ ದಂಡಾಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾದ್ಯಂತ ಭದ್ರತೆಗಾಗಿ 5000 ಪೊಲೀಸರು, 7ASP, 30 DYSP, 30 ಇನ್ಸ್ಪೆಕ್ಟರ್, ನೂರಾರು ಹೋಂಗಾರ್ಡ್, 20 KSRP ತುಕಡಿ ಸೇರಿದಂತೆ ಹಲವು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 300ಕ್ಕೂ ಅಧಿಕ ಸಿಸಿ ಕ್ಯಾಮೆರಾ ಹಾಗೂ 50ಕ್ಕೂ ಹೆಚ್ಚು ಬಾಡಿ ಕ್ಯಾಮೆರಾ, 2 ಸಿಸಿ ಟಿವಿ ಕ್ಯಾಮೆರಾ ವೀಕ್ಷಣಾ ತಂಡಗಳ ರಚನೆ ಮಾಡಲಾಗಿದೆ.
ಇನ್ನು ಪೊಲೀಸರು ನಗರದ ರಾಮನ ಹಳ್ಳಿಯಿಂದ ನಗರದ ಎಂಜಿ ರಸ್ತೆ ಮೂಲಕ 5000ಕ್ಕೂ ಅಧಿಕ ಪೊಲೀಸರು ರೂಟ್ ಮಾರ್ಚ್ ಮಾಡಿದ್ದಾರೆ. ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನಗರದ ಹೊರ ವಲಯದಲ್ಲೂ ಕೂಡ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲೆಯಾದ್ಯಂತ ನಾಳೆಯಿಂದ ಮೂರು ದಿನಗಳ ಕಾಲ ಮದ್ಯಪಾನ ನಿಷೇಧ ಜಾರಿ ಮಾಡಿದ್ದು, ಜೊತೆಗೆ ದತ್ತಪೀಠ ಮಾರ್ಗದಲ್ಲಿ ಬಾರಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ರೆಸಾರ್ಟ್, ಹೋಂ ಸ್ಟೇಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶ ಇದ್ದು, ದತ್ತ ಜಯಂತಿ ದಿನಾಂಕ ಘೋಷಣೆ ಆದ ಬಳಿಕ ಬುಕ್ಕಿಂಗ್ ಮಾಡಿದ ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.