ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ಚಿಕ್ಕಮಗಳೂರು:ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ನೂರಾರು ದತ್ತ ಭಕ್ತರು ಮಾಲೆಧಾರಣೆ ಮಾಡುವ ಮೂಲಕ 10 ದಿನಗಳ ದತ್ತ ಜಯಂತಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲೆಧಾರಣೆ ಮಾಡಿದ್ದಾರೆ. ಇದೇ 24ರ ಭಾನುವಾರ ನಗರದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಸಂಕೀರ್ತನಾ ಯಾತ್ರೆ ನಡೆಸಿ ದತ್ತಪೀಠದಲ್ಲಿ ಹೋಮ, ಹವನ ನಡೆಸುವ ಮೂಲಕ ಅನುಸೂಯ ಜಯಂತಿ ಆಚರಿಸಲಿದ್ದಾರೆ.
25ರ ಸೋಮವಾರ ಚಿಕ್ಕಮಗಳೂರು ನಗರದಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು 30 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. 26ರಂದು ರಾಜ್ಯದ ಮೂಲೆಮೂಲೆಗಳಿಂದ ಬರುವ ಅಪಾರ ಸಂಖ್ಯೆಯ ಭಕ್ತರು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆಯುವರು.
ಸಿ.ಟಿ.ರವಿ ಮಾತನಾಡಿ, "ಟೆನೆಂಟ್ ಆ್ಯಕ್ಟ್ ಬರುವುದಕ್ಕಿಂತ ಮುಂಚೆ ದತ್ತಾತ್ರೇಯ ದೇವರ ಹೆಸರಿನಲ್ಲಿ 1861 ಎಕರೆ ಜಮೀನಿತ್ತು ಎಂದು ಕಂದಾಯ ಇಲಾಖೆಯ ದಾಖಲೆಗಳು ಹೇಳುತ್ತವೆ. ಹರಕೆ, ಕಾಣಿಕೆಯ ಬೆಳ್ಳಿ ಮತ್ತು ಚಿನ್ನದ ಚರಾಸ್ತಿಗಳನ್ನು ಅಕ್ರಮವಾಗಿ ಪರಭಾರೆ ಮಾಡಿದ್ದಾರೆ ಮತ್ತು ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮೇಜರ್ ಪೂವಯ್ಯ ನೇತೃತ್ವದ ಸಮಿತಿಯನ್ನು ಹಿಂದಿನ ಸರ್ಕಾರ ರಚಿಸಿತ್ತು. ಪೂವಯ್ಯ ಈಗ ಬದುಕಿಲ್ಲ. ಅವರ ನೇತೃತ್ವದ ಸಮಿತಿ ಅಕ್ರಮ ಆಗಿರುವುದು ನಿಜ ಎಂದು ವರದಿ ಕೊಟ್ಟಿತ್ತು. ಚರಾಸ್ತಿ ಪರಭಾರೆಯ ಜೊತೆಗೆ ಸ್ಥಿರಾಸ್ತಿ 1861 ಎಕರೆ ಜಮೀನನ್ನು ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಈ ಹಿಂದೆ ದೂರು ಕೊಟ್ಟಿದ್ದೆವು" ಎಂದರು.
"ರಾಜ್ಯಮಟ್ಟದ ಪ್ರಿನ್ಸಿಪಾಲ್ ಸೆಕ್ರೆಟರಿ ಮತ್ತು ವಿಭಾಗ ಮಟ್ಟದ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸುವುದಕ್ಕೆ ಈ ಹಿಂದೆ ಸರ್ಕಾರ ಸೂಚನೆ ಕೊಟ್ಟಿತ್ತು. ಈ ಸಮಿತಿ ಸಾರ್ವಜನಿಕರ ಅಹವಾಲುಗಳು ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಟೆನೆಂಟ್ ಆ್ಯಕ್ಟ್ ಬರುವುದಕ್ಕಿಂತ ಮುಂಚೆ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ 1861 ಎಕರೆ ಜಮೀನನ್ನು ಮತ್ತೆ ದೇವರ ಹೆಸರಿಗೆ ರಿರೆಸ್ಟೋರ್ ಮಾಡಬೇಕು. ಯಾರು ಅಕ್ರಮ ನಡೆಸಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.
ಇದನ್ನೂ ಓದಿ:ಚಿಕ್ಕಮಗಳೂರು: ದತ್ತ ಜಯಂತಿಗೆ ಜಿಲ್ಲಾಡಳಿತದಿಂದ ಭರದ ಸಿದ್ಧತೆ