ಚಿಕ್ಕಮಗಳೂರು: ಕಳೆದ 4 ದಿನಗಳಿಂದ ಚಿಕ್ಕಮಗಳೂರು-ಶಿವಮೊಗ್ಗದ ಗಡಿ ಭಾಗದಲ್ಲಿರುವ ಭದ್ರಾ ಅಭಯಾರಣ್ಯ ವಸತಿ ನಿಲಯದಲ್ಲಿ ನೆಲೆಸಿರುವ ಸ್ಯಾಂಡಲ್ವುಡ್ ನಟ ದರ್ಶನ್ ಫೋಟೋಗ್ರಫಿ ಮಾಡುವ ಮೂಲಕ ಸುಂದರ ಪರಿಸರವನ್ನು ಎಂಜಾಯ್ ಮಾಡುತ್ತಿದ್ದಾರೆ.
ಭದ್ರಾ ಅಭಯಾರಣ್ಯದಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದ ನಟ ದರ್ಶನ್
ರಾಜ್ಯ ಅರಣ್ಯ ಇಲಾಖೆ ರಾಯಭಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋಗ್ರಫಿಗಾಗಿ ಕಳೆದ 4 ದಿನಗಳ ಹಿಂದೆ ಚಿಕ್ಕಮಗಳೂರು-ಶಿವಮೊಗ್ಗ ಗಡಿಯ ಭದ್ರಾ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ.
ಅರಣ್ಯ ಇಲಾಖೆಯ ರಾಯಭಾರಿ ಕೂಡಾ ಆಗಿರುವ ನಟ ದರ್ಶನ್ ಭದ್ರಾ ಅಭಯಾರಣ್ಯದಲ್ಲಿ ಗಿಡ ನೆಟ್ಟು ನೀರೆರೆದಿದ್ದಾರೆ. ಹಾಸ್ಯನಟ ಚಿಕ್ಕಣ್ಣ, ರಾಬರ್ಟ್ ನಿರ್ಮಾಪಕ ಉಮಾಪತಿ ಕೂಡಾ ದರ್ಶನ್ಗೆ ಸಾಥ್ ನೀಡಿದ್ದಾರೆ. ವನ್ಯಜೀವಿ ಪರಿಪಾಲಕರಾದ ಗಣೇಶ್ ಬಿ.ಎಸ್. ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಸತೀಶ್ , ಸಿಬ್ಬಂದಿ ಹಾಗೂ ಇನ್ನಿತರರು ಹಾಜರಿದ್ದರು.
ಇನ್ನು ದರ್ಶನ್ ಚಿಕ್ಕಮಗಳೂರಿಗೆ ಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ವಸತಿ ಗೃಹದತ್ತ ದೌಡಾಯಿಸುತ್ತಿದ್ದಾರೆ. ದರ್ಶನ್ ಕೂಡಾ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಎಲ್ಲರೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.