ಚಿಕ್ಕಮಗಳೂರು :ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಡಿ ಕೆ ಶಿವಕುಮಾರ್ ಅವರು ದೇವರ ದರ್ಶನಕ್ಕೆ ಹೋಗುವ ವೇಳೆ ಟಿಕೆಟ್ ಆಕಾಂಕ್ಷಿಗಳು ಅವರಿಗೆ ಅಡ್ಡ ಹಾಕಿ ಟಿಕೆಟ್ ಕೇಳಿರುವ ಘಟನೆ ನಡೆದಿದೆ. ಶೃಂಗೇರಿಯಲ್ಲಿ ಡಿ ಕೆ ಶಿವಕುಮಾರ್ಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ತಮ್ಮಯ್ಯಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ.
ಹೆಚ್ ಡಿ ತಮ್ಮಯ್ಯ ಬಲ ಪ್ರದರ್ಶನ: ಟಿಕೆಟ್ ನೀಡಿದರೆ ಗೆಲ್ಲಿಸ್ತೀವಿ ಎಂದು ತಮ್ಮಯ್ಯ ಬೆಂಬಲಿಗರು ಡಿ ಕೆ ಶಿವಕುಮಾರ್ಗೆ ಮನವಿ ಮಾಡಿದ್ದಾರೆ. ಸಿಟಿ ರವಿ ಬೆಂಬಲಿಗರಾಗಿದ್ದ ತಮ್ಮಯ್ಯ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮೂಲ ವರ್ಸಸ್ ವಲಸಿಗ ಎಂಬ ವಿವಾದದ ಹಿನ್ನೆಲೆಯಲ್ಲಿ ಟಿಕೆಟ್ ನೀಡಿಕೆ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಹೀಗಾಗಿ ಇದುವರೆಗೂ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿಲ್ಲ. ಈ ನಡುವೆ ಶಾರದಾಂಬೆಯ ದರ್ಶನ ಪಡೆದು ವಾಪಸ್ ಬರ್ತಿದ್ದಂತೆ ಮತ್ತೆ ಹೆಚ್ ಡಿ ತಮ್ಮಯ್ಯ ಬಲ ಪ್ರದರ್ಶನ ಮಾಡಿದ್ದಾರೆ.
ದೇವರ ದರ್ಶನದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ನಾನು ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕಿಂತ ಮುಂಚೆ ದೇವರ ದರ್ಶನಕ್ಕೆಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ಇಂದಿರಾಗಾಂಧಿ ಅವರಿಗೆ ಆಶೀರ್ವಾದ ನೀಡಿದಂತ ಪೀಠ ಇದು. ನಾನು ಇಲ್ಲಿ ಶಾರದಾಂಬೆ ಪ್ರಾರ್ಥನೆ ಮಾಡಿ ದೇವರ ಆಶೀರ್ವಾದ ಪಡೆಯಬೇಕು ಎಂದು ಬಂದಿದ್ದೇನೆ. ಅಷ್ಟು ಬಿಟ್ರೆ ಇಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದರು.