ಮಂಗಳೂರು:ಹಿಜಾಬ್ ವಿವಾದ ವಿಚಾರದಿಂದ ಇಡೀ ದೇಶಕ್ಕೆ ಅವಮಾನವಾಗಿದೆ. ಕೇಸರಿ ಶಾಲು ಯಾಕೆ ಬಂದಿದೆ ಎಂಬುದು ನಮಗೆ ಗೊತ್ತಿದೆ. ನಾವು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇಶ ಉಳಿಸಬೇಕೆಂಬುದು ನಮ್ಮ ಚಿಂತನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ವಿಚಾರವಾಗಿ ಮಂಗಳೂರಿಗೆ ಬಂದ ಅವರು, ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಕರಾವಳಿಯ ಜಿಲ್ಲೆಗಳು ತಮ್ಮದೇ ಆದ ಇತಿಹಾಸ ಹೊಂದಿವೆ. ಶಿಕ್ಷಣ, ವೈದ್ಯಕೀಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದೆ.
ಆದರೆ, ಇದೀಗ ಇಲ್ಲಿನ ಸಂಪನ್ಮೂಲಗಳನ್ನು ಸರಿಯಾಗಿ ಬಳಸದೇ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಿ, ಭಾವನೆಗಳನ್ನು ಕೆರಳಿಸಿ ಹಾಳುಗೆಡುವಲಾಗುತ್ತಿದೆ. ಇಲ್ಲಿನ ಸಂಪ್ರದಾಯ ಬದಲಾವಣೆ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.