ಚಿಕ್ಕಮಗಳೂರು : ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ(ಡಿಬಿ ಚಂದ್ರೇಗೌಡ) ಇಂದು ಆಗಲಿದ್ದಾರೆ. ನಾಲ್ಕೂವರೆ ದಶಕದ ಸುದೀರ್ಘ ರಾಜಕೀಯ ಬದುಕಿನಲ್ಲಿ ಸ್ಪೀಕರ್, ಪ್ರತಿಪಕ್ಷ ನಾಯಕ, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನಾಲ್ಕು ಪಕ್ಷ ಮತ್ತು ನಾಲ್ಕು ಸದನಗಳಾದ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅಪರೂಪದ ಸಾಧನೆ ಮಾಡಿದ್ದರು. ಹೀಗೆ ಕಾರ್ಯ ನಿರ್ವಹಿಸಿದ್ದರೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗಾಗಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಚಂದ್ರೇಗೌಡರ ರಾಜಕೀಯ ಜೀವನದಲ್ಲಿ ಮಹತ್ವದ ಘಟ್ಟವಾಗಿತ್ತು.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ 1936 ರ ಆಗಸ್ಟ್ 26 ರಂದು ಡಿಎ ಬೈರೇಗೌಡ ಮತ್ತು ಪುಟ್ಟಮ್ಮ ದಂಪತಿ ಪುತ್ರನಾಗಿ ಚಂದ್ರೇಗೌಡ ಜನಿಸಿದ್ದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ತಮ್ಮ ಬಿಎಸ್ಸಿ ಶಿಕ್ಷಣವನ್ನು ಮತ್ತು ಬೆಳಗಾವಿಯ ಆರ್ಎಲ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದರು. ವಿದ್ಯಾಭ್ಯಾಸದ ಬಳಿಕ 1966 ರ ಮೇ 22 ರಂದು ಪೂರ್ಣ ಅವರೊಂದಿಗೆ ವಿವಾಹವಾಯಿತು. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ.
ಕಾಲೇಜು ದಿನಗಳಲ್ಲಿ ರಾಜಕೀಯ ಕ್ಷೇತ್ರದ ಹಾದಿ ತುಳಿದಿದ್ದ ಅವರು, ಮೊದಲು ರೇಣುಕಾಚಾರ್ಯ ಕಾಲೇಜು ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಆರ್ಎಲ್ ಕಾಲೇಜಿನಲ್ಲಿದ್ದಾಗ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾದರು. ಕಾಲೇಜು ಮುಗಿಸಿದ ನಂತರ ರಾಜಕೀಯ ಕ್ಷೇತ್ರದತ್ತ ಹೆಜ್ಜೆ ಇಟ್ಟರು. ಅದಕ್ಕೆ ಅವರಿಗೆ ವೇದಿಕೆ ಕಲ್ಪಿಸಿದ್ದು ಪ್ರಜಾ ಸೋಷಿಯಲಿಸ್ಟ್ ಪಕ್ಷ. 1967ರ ವರೆಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿದ್ದ ಚಂದ್ರೇಗೌಡರು, ರಾಜಕೀಯ ಪಕ್ಷದ ಬದಲಾವಣೆ ಮಾಡಿ ಹೊಸ ರಾಜಕಾರಣ ಮಾಡಲು ನಿರ್ಧರಿಸಿ ಕಾಂಗ್ರೆಸ್ ಸೇರಿದ್ದರು.
1971 ರಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು. ಆ ಮೂಲಕ ರಾಷ್ಟ್ರ ರಾಜಕಾರಣದಿಂದಲೇ ಅವರ ರಾಜಕೀಯ ಜೀವನ ಆರಂಭವಾಯಿತು. 1977 ರಲ್ಲಿ ಚಿಕ್ಕಮಗಳೂರಿನ ಲೋಕಸಭಾ ಸದಸ್ಯರಾಗಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿ ಪುನರಾಯ್ಕೆಯಾದರು. ಅದಾದ ವರ್ಷದಲ್ಲೇ 1978 ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದರು.