ಚಿಕ್ಕಮಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಕಾಫಿನಾಡಿನ ಜನ ಕೊಂಚ ಡಿಫರೆಂಟ್ ಆಗಿ ಆಚರಿಸ್ತಾರೆ. ವರ್ಷಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸೋ ದೇವಿಯ ಕಂಡು ಧನ್ಯರಾಗುತ್ತಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರೋ ಬಿಂಡಿಗದ ಬಳಿಯ ಶ್ರೀ ದೇವಿರಮ್ಮನ ಬೆಟ್ಟದಲ್ಲಿ ದೀಪಾವಳಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ದೇವಿರಮ್ಮ ಬೆಟ್ಟ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ನೆಲೆಗೊಂಡಿರುವ ದೇವಿ ದರ್ಶನ ನೀಡೋದು ವರ್ಷಕೊಮ್ಮೆ ಮಾತ್ರ. ಹೀಗಾಗಿ ಸಾವಿರಾರು ಮಂದಿ ಬರಿಗಾಲಲ್ಲೇ 8 ಕಿ.ಮೀ. ನಡೆದುಕೊಂಡು ಬಂದು ದೇವಿಯ ದರ್ಶನ ಪಡೆಯುತ್ತಾರೆ.
ದೀಪಾವಳಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದಕ್ಕಾಗಿ ಈ ದಿನ ಬೆಳಗ್ಗೆಯಿಂದಲೇ ಪ್ರತಿ ವರ್ಷ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಆಗಮಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಮಹಾಮಾರಿ ಬಂದಿರುವ ಹಿನ್ನೆಲೆ ಹೊರಗಿನಿಂದ ಬರುವಂತಹ ಭಕ್ತರಿಗೆ ಬೆಟ್ಟ ಹತ್ತಲು ಜಿಲ್ಲಾಡಳಿತ ಹಾಗೂ ಗ್ರಾಮಸ್ಥರು ಅವಕಾಶ ಮಾಡಿಕೊಟ್ಟಿಲ್ಲ. ಬದಲಾಗಿ ಊರಿನ ಭಕ್ತರಿಗೆ ಮಾತ್ರ ಬೆಟ್ಟದ ಮೇಲೆ ನೆಲೆಸಿರುವ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಅವರ ಪತ್ನಿ ಪಲ್ಲವಿ ರವಿ ಇಂದು ದೇವಿರಮ್ಮ ಬೆಟ್ಟವನ್ನು ಬರಿಗಾಲಲ್ಲಿ ಏರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಮಾಡಿಸಿದ್ರು.